ಮಂಡ್ಯ: ಕೆಆರ್‌ಎಸ್ ಡ್ಯಾಂ ಬಳಿ ಕಲ್ಲುಗಳು ಕುಸಿತವಾಗಿರುವ ಸಂಬಂಧ ಸರಿಯಾಗಿ ಮಾಹಿತಿ ನೀಡದ ನೀರಾವರಿ ಅಧಿಕಾರಿಗಳ ವಿರುದ್ಧ ಸಂಸದೆ ಸುಮಲತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿನ್ನೆ ಸಂಜೆ ಡ್ಯಾಂನ ಕಾವೇರಿ ಪ್ರತಿಮೆ ಬಳಿ ಕಲ್ಲುಗಳು ಕುಸಿದ ಬಗ್ಗೆ ಮಾಹಿತಿ ಇದೆ. ನಾನು ಈ ಬಗ್ಗೆ ಕೇಳಿದಾಗ ಯಾವ ಅಧಿಕಾರಿ ಕೂಡ ಸರಿಯಾಗಿ ಮಾಹಿತಿ ನೀಡಿಲ್ಲ. ಕೆಲವು ದಿನಗಳ ಹಿಂದೆ ಕೆಆರ್ಎಸ್ನಲ್ಲಿ ಬಿರುಕಿದೆ ಎಂದು ಹೇಳಿದಾಗ ನನ್ನ ವಿರುದ್ಧ ಜೆಡಿಎಸ್ನವರು ರಾಜ್ಯ ವ್ಯಾಪಿ ಟೀಕೆ ಮಾಡಿದರು ಎಂದು ತಿಳಿಸಿದರು.
ಇದನ್ನೂ ಓದಿ: ಸುಮಲತಾ KRS ಬಿರುಕು ಹೇಳಿಕೆ ಬೆನ್ನಲ್ಲೇ ಕಾವೇರಿ ಪ್ರತಿಮೆ ಬಳಿ ಕುಸಿದ ಕಲ್ಲು!
ನೀರಾವರಿ ಅಧಿಕಾರಿಗಳು ಡ್ಯಾಂನಲ್ಲಿ ಯಾವುದೇ ಬಿರುಕಿಲ್ಲವೆಂದು ವರದಿ ನೀಡಿದರು. ಆದರೀಗ ಕಲ್ಲುಗಳು ಕುಸಿತವಾಗಿವೆ. ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಜತೆಗೆ ಈ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಸುಮಲತಾ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಆತಂಕವಿಲ್ಲ- ಕಾವೇರಿ ನಿಗಮದ ಅಧಿಕಾರಿಗಳು
ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ಜಯಪ್ರಕಾಶ್, ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ರಾಕೇಶ್ ಸಿಂಗ್ ಹಾಗು ಕಾವೇರಿ ನೀರಾವರಿ ನಿಯಮದ ಎಸ್ಇ ವಿಜಯ ಕುಮಾರ್ ಸೇರಿದಂತೆ ಹಲವು ಅಧಿಕಾರಿಗಳು ಕಲ್ಲು ಕುಸಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ಮಣ್ಣು, ಸುರ್ಕಿಯಿಂದ ನಿರ್ಮಾಣ ಮಾಡಿದ್ದ ಮೆಟ್ಟಿಲುಗಳು ಏಕಾಏಕಿ ಕುಸಿದಿವೆ. ಯಾವುದೇ ಆತಂಕವಿಲ್ಲ ಎಂದು ತಿಳಿಸಿದ್ದಾರೆ.
ಬೇಬಿ ಬೆಟ್ಟದ ಕಲ್ಲು ಗಣಿಗಾರಿಕೆ ವಿವಾದದ ಬೆನ್ನಲ್ಲೇ ಕೃಷ್ಣರಾಜ ಸಾಗರ ಅಣೆಕಟ್ಟೆ +80 ಅಡಿ ಗೇಟ್ಗಳ ಬಳಿ ಇರುವ ಡ್ಯಾಂನಿಂದ ಬೃಂದಾವನ ಹಾಗೂ ಕಾವೇರಿ ಪ್ರತಿಮೆಗೆ ಹೋಗಲು ನಿರ್ಮಿಸಿದ್ದ ಮೆಟ್ಟಿಲಿನ ಕಲ್ಲು ಕುಸಿತದಿಂದ ಅಪಾಯದ ಭೀತಿ ಉಂಟಾಗಿತ್ತು. ಡ್ಯಾಂ ಭದ್ರತೆ ದೃಷ್ಟಿಯಿಂದ ಹಲವು ವರ್ಷದ ಹಿಂದೆಯೇ ಮೆಟ್ಟಿಲುಗಳ ಮೇಲೆ ಸಾರ್ವಜನಿಕರ ಸಂಚಾರ ನಿರ್ಬಂಧಿಸಲಾಗಿತ್ತು.
ಇದನ್ನೂ ಓದಿ: ಕಲ್ಲು ಕುಸಿತ ಸ್ಥಳಕ್ಕೂ ಡ್ಯಾಂಗೂ ಯಾವುದೇ ಸಂಬಂಧವಿಲ್ಲ: ರವೀಂದ್ರ ಶ್ರೀಕಂಠಯ್ಯ