ಮಂಡ್ಯ: ನಾನು ರಾಜಕಾರಣ ಬಿಟ್ಟು ಬಹಳ ವರ್ಷಗಳಾಗಿವೆ. ನೂತನ ಸಿಎಂ ಬಸವರಾಜು ಬೊಮ್ಮಾಯಿ ಸಕ್ರಿಯ ರಾಜಕಾರಣಿ. ಅವರು ಉತ್ತಮವಾಗಿ ಕಾರ್ಯನಿರ್ವಹಿಸಲಿ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಶುಭ ಹಾರೈಸಿದರು.
ಮದ್ದೂರಿನ ಉಗ್ರ ನರಸಿಂಹ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ಕೊಟ್ಟ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಹಾಗೂ ಬಸವರಾಜ ಬೊಮ್ಮಾಯಿ ಅವರ ತಂದೆ ಒಳ್ಳೆಯ ಸ್ನೇಹಿತರು. ನಾನು ಸಿಎಂ ಆಗಿದ್ದ ಸಂದರ್ಭದಲ್ಲಿ ಬಸವರಾಜ ವಿಧಾನ ಪರಿಷತ್ನಲ್ಲಿ ಸಕ್ರಿಯವಾಗಿ ಕೆಲಸ ಮಾಡ್ತಿದ್ರು ಎಂದರು.
ವಿಚಾರಗಳನ್ನ ಅರ್ಥಮಾಡಿಕೊಳ್ಳುವ ಚೈತನ್ಯಪೂರ್ಣ ವ್ಯಕ್ತಿ ಬಸವರಾಜ: ಸಿಎಂ ಬಸವರಾಜ ಅವರು ವಿಚಾರಗಳನ್ನು ಅಧ್ಯಯನ ಹಾಗೂ ಅರ್ಥಮಾಡಿಕೊಳ್ಳುವ ಚೈತನ್ಯಪೂರ್ಣ ವ್ಯಕ್ತಿ. ಒಳ್ಳೆಯ ಕೆಲಸಗಳು ನಡೆಯಲು ಬಸವರಾಜ ಬೊಮ್ಮಾಯಿ ಅವರು ಪ್ರೇರಣಾ ಶಕ್ತಿಯಾಗಬೇಕು ಎಂದು ಸಲಹೆ ನೀಡಿದರು.
ಮೈಶುಗರ್ ಕಾರ್ಖಾನೆ ಪ್ರಾರಂಭಿಸುವಂತೆ ಸರ್ಕಾರಕ್ಕೆ ಸಲಹೆ: ಮೈಶುಗರ್ ಕಾರ್ಖಾನೆ ಪ್ರಾರಂಭಿಸುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ವಿಷಯವನ್ನು ಪ್ರಚಲಿತ ರಾಜಕಾರಣ ಮಾಡ್ತಿರುವವರಿಗೆ ಬಿಡ್ತೇನೆ. ಮೈಶುಗರ್ ಕಾರ್ಖಾನೆ ಮತ್ತೆ ಪ್ರಾರಂಭಿಸುವ ಬಗ್ಗೆ ಕೆಲವು ರೈತ ಮುಖಂಡರು ಭೇಟಿ ಮಾಡಿದ್ರು. ನಾನು ನನ್ನ ಸಹಮತವನ್ನು ವ್ಯಕ್ತಪಡಿಸಿದ್ದೇನೆ. ಸರ್ಕಾರ ಮತ್ತು ರೈತ ಮುಖಂಡರು ಪರಸ್ಪರ ಚರ್ಚೆ ಮಾಡಿ ಆದಷ್ಟು ಬೇಗ ಮೈಶುಗರ್ ಕಾರ್ಖಾನೆ ಶುರು ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
ನೂತನ ಸಚಿವರು ಒಳ್ಳೆ ಕೆಲಸ ಮಾಡಲಿ: ಸಚಿವ ಸಂಪುಟ ವಿಚಾರವಾಗಿ ಮಾತನಾಡಿ, ನೂತನ ಸಚಿವರು ಒಳ್ಳೆಯ ಕೆಲಸ ಮಾಡಲಿ. ಒಳ್ಳೆಯ ಹೆಸರು ತೆಗೆದುಕೊಳ್ಳಲಿ ಎಂದು ಹಾರೈಸುತ್ತೇನೆ. ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟಕ್ಕೆ ಒಳ್ಳೆಯದಾಗಲಿ ಎಂದರು.