ಮಂಡ್ಯ: ಮೈಶುಗರ್ ಸಕ್ಕರೆ ಕಾರ್ಖಾನೆ ಮುಂದಿನ ದಿನಗಳಲ್ಲಿ ನಷ್ಟದ ಹಾದಿಗೆ ಹೋಗದೇ ರೈತರಿಗೆ ಪೂರಕವಾಗಿ ಕಾರ್ಯನಿರ್ವಹಿಸಲು ತಾಂತ್ರಿಕ ಹಾಗೂ ಹಣಕಾಸು ವರದಿಯನ್ನು ಮಾಡಿಕೊಂಡು ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಕೈಮಗ್ಗ ಮತ್ತು ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಂಕರ್ ಬಿ ಪಾಟೀಲ್ ಮುನೇನಕೊಪ್ಪ ತಿಳಿಸಿದರು.
ಅವರು ಇಂದು ಮೈಶುಗರ್ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿ ಯಂತ್ರಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿ ನಂತರ ಮಾತನಾಡಿದರು. ತಾಂತ್ರಿಕ ವರದಿಯಲ್ಲಿ ಹಣ ವ್ಯರ್ಥವಾಗದಂತೆ ಯಾವ ರೀತಿ ಕಾರ್ಯನಿರ್ವಹಿಸಬಹುದು. ಅವುಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದರು. ಕಬ್ಬು ನುರಿಸುವ ಕೆಲಸ ಪ್ರಾರಂಭವಾದ ನಂತರ ಮುಂದಿನ ದಿನಗಳಲ್ಲಿ ಇಥೆನಾಲ್ ಉತ್ಪಾದನೆ ಘಟಕ ಸಹ ಪ್ರಾರಂಭಿಸಲಾಗುವುದು ಎಂದರು.
ಕಬ್ಬು ತರಲು ಸಿದ್ಧತೆ: ಮಾನ್ಯ ಮುಖ್ಯಮಂತ್ರಿಗಳು ಸೆ. 10 ರೊಳಗಾಗಿ ಮೈ ಶುಗರ್ ಕಾರ್ಖಾನೆಯ ಪುನರಾರಾಂಭಕ್ಕೆ ಚಾಲನೆ ನೀಡಲಿದ್ದಾರೆ. ಮೈ ಶುಗರ್ ಕಾರ್ಖಾನೆ ಆರಂಭದಿಂದ ಮಂಡ್ಯ ಜಿಲ್ಲೆಯ ರೈತರಲ್ಲಿ ಸಂತೋಷ ಮೂಡಲಿದೆ. ರೈತ ಹೋರಾಟಗಾರರ ಒತ್ತಾಯ ಹಾಗೂ ಆಶಯದಂತೆ ತಾಂತ್ರಿಕ ಸಮಿತಿ ರಚಿಸಿ ಅವರಿಂದ ವರದಿ ಪಡೆದು ಮೈ ಶುಗರ್ ಆರಂಭಿಸಲಾಗುತ್ತಿದೆ. ಆರಂಭಕ್ಕೆ ಅನುದಾನದ ಕೊರತೆ ಉಂಟಾಗದಂತೆ ಸಹ ನೋಡಿಕೊಳ್ಳಲಾಗಿದೆ. ಮೈಶುಗರ್ಗೆ ಆಗಸ್ಟ್ 31 ರಂದು ಕಬ್ಬು ತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಖಾನೆಯಲ್ಲಿ ಅವಕಾಶವಿಲ್ಲ: ಮೈಶುಗರ್ ಸಕ್ಕರೆ ಕಾರ್ಖಾನೆ ಕರ್ನಾಟಕ ರಾಜ್ಯದ ಹೆಮ್ಮೆ. ಇದು ಮುಂದಿನ ದಿನಗಳಲ್ಲಿ ಮುಚ್ಚದಂತೆ ನೋಡಿಕೊಳ್ಳಲು ಕಾರ್ಖಾನೆಯ ಬಗ್ಗೆ ಹೆಚ್ಚಿನ ಜ್ಞಾನ ಇರುವ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಸರ್ಕಾರದ ವ್ಯಾಪ್ತಿಯಲ್ಲೇ ನಡೆಸಲಾಗುವುದು. ನಿಯಮ ಉಲ್ಲಂಘನೆ, ಕಾನೂನು ಬಾಹಿರ ಕೆಲಸಗಳಿಗೆ ಕಾರ್ಖಾನೆಯಲ್ಲಿ ಅವಕಾಶವಿಲ್ಲ. ಎಲ್ಲಾ ಕೆಲಸಗಳನ್ನು ಪಾರದರ್ಶಕವಾಗಿ ನಡೆಸಲಾಗುವುದು ಎಂದು ಹೇಳಿದರು.
ಓದಿ: ಸಮರ್ಥವಾಗಿ ಚುನಾವಣೆ ಎದುರಿಸಲು ಸಜ್ಜಾಗಿ.. ಕಾಂಗ್ರೆಸ್ನಿಂದ ಬಿಬಿಎಂಪಿ ಚುನಾವಣಾ ಪ್ರಣಾಳಿಕೆ ಸಮಿತಿ ಸಭೆ