ಮಂಡ್ಯ : ಜಾತಿ ಆಧಾರದ ಮೇಲೆ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದು ಪ್ರಜಾಪ್ರಭುತ್ವದ ಅಣಕ. ಯೋಗ್ಯತೆ, ಸಾಧನೆ, ಸಾಮಾಜಿಕ ಕಳಕಳಿ ಇರುವ ವ್ಯಕ್ತಿಗಳು ಮುಖ್ಯಮಂತ್ರಿ ಆಗಬೇಕು ಎಂದು ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಹೇಳಿದ್ದಾರೆ. ಜಿಲ್ಲೆಯ ಮದ್ದೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜಾತಿ ಆಧಾರದ ಮೇಲೆ ಮುಖ್ಯಮಂತ್ರಿ ಆಯ್ಕೆ ಮಾಡುವುದು ಸರಿಯಲ್ಲ ಎಂದು ಪ್ರತಿಪಾದಿಸಿದ್ದಾರೆ.
ಪ್ರತಿ ರಾಜಕೀಯ ಕಾಲಘಟ್ಟದಲ್ಲಿ ಒಂದೊಂದು ತಿರುವು ಇರುತ್ತದೆ. ಭ್ರಷ್ಟಾಚಾರ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಮಾರಕ. ನಾನೇ ಐದು ವರ್ಷ ಸಿಎಂ ಆಗುತ್ತೇನೆ ಎಂಬ ಕಾಲಘಟ್ಟಕ್ಕೆ ತಲುಪಿರುವುದು ಅನಾರೋಗ್ಯಕರ. ಈಗ ಈ ಪ್ರಶ್ನೆ ಉದ್ಭವಿಸಬೇಕಾಗಿರಲಿಲ್ಲ. ಇತಿ ಮಿತಿಗಳನ್ನು ಗಮನದಲ್ಲಿಟ್ಟುಕೊಂಡು ಮುಂದುವರೆದರೆ ಈ ದ್ವಂದ್ವಕ್ಕೆ ಪರಿಹಾರ ಸಿಗಬಹುದು ಎಂದು ಎಸ್.ಎಂ. ಕೃಷ್ಣ ಕಿವಿಮಾತು ಹೇಳಿದ್ದಾರೆ.
ಕಾವೇರಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರವು ಕಾವೇರಿ ಪ್ರಾಧಿಕಾರದ ಆದೇಶವನ್ನು ಅನುಸರಿಸುವುದು ಅನಿವಾರ್ಯವಾಗಿದೆ. ನನ್ನ ಪ್ರಕಾರ ಎರಡು ರಾಜ್ಯಗಳ ರೈತ ಮುಖಂಡರುಗಳು ಒಟ್ಟು ಸೇರಿ ಈ ಸಂಬಂಧ ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು ಎಂಬ ಸಲಹೆಯನ್ನೂ ಕೃಷ್ಣ ನೀಡಿದ್ದಾರೆ.
ಇದನ್ನೂ ಓದಿ : ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್: ಡಿಕೆಶಿ ಸೇರಿ 16 ಸಚಿವರಿಗೆ ಆಹ್ವಾನ