ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕರಿಘಟ್ಟ ಬೆಟ್ಟದ ಹಿಂಭಾಗ ಇರುವ ಅಲ್ಲಾಪಟ್ಟಣ-ಮರಳಗಾಲ ಗ್ರಾಮಗಳ ವ್ಯಾಪ್ತಿಯಲ್ಲಿರುವ ಪ್ರದೇಶದಲ್ಲಿ ಲೀಥಿಯಂ ನಿಕ್ಷೇಪ ಇದೆ ಎಂದು ಕೇಂದ್ರ ಪರಮಾಣು ಖನಿಜ ನಿರ್ದೇಶನಾಲಯ ಪರಿಶೋಧನಾ ಇಲಾಖೆ ಖಚಿತಪಡಿಸಿದೆ. ಈ ಲೀಥಿಯಂ ಬ್ಯಾಟರಿ ತಯಾರು ಮಾಡಲು ಅತ್ಯವಶ್ಯವಾಗಿದೆ.
ಇಷ್ಟು ವರ್ಷಗಳ ಕಾಲ ಭಾರತ ಬೇರೆ ದೇಶದಿಂದ ಲೀಥಿಯಂ ಆಮದು ಮಾಡಿಕೊಳ್ಳುತ್ತಿತ್ತು. ಶ್ರೀರಂಗಪಟ್ಟಣದ ಈ ಭಾಗದಲ್ಲಿ ಸುಮಾರು 16,000 ಟನ್ನಷ್ಟು ಲೀಥಿಯಂ ನಿಕ್ಷೇಪ ಇದೆ ಎಂದು ಅಣುಶಕ್ತಿ ನಿರ್ದೇಶನಾಲಯದ ವಿಜ್ಞಾನಿಗಳ ತಂಡ ಹೇಳಿದೆ. ಈ ಪ್ರದೇಶದಲ್ಲಿ ಲೀಥಿಯಂ ಅಲ್ಲದೆ ಕಾಗೆ ಬಂಗಾರದಂತಹ ಖನಿಜ ಸಂಪನ್ಮೂಲಗಳು ಸಹ ಇವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಅಲ್ಲಾಪಟ್ಟಣ ಹಾಗೂ ಮರಳಗಾಲ ಪ್ರದೇಶದಲ್ಲಿ ಲೀಥಿಯಂ ನಿಕ್ಷೇಪದ ಕುರಿತು ಸಮಾರು 40 ವರ್ಷಗಳಿಂದ ವಿಜ್ಞಾನಿಗಳು ಸಂಶೋಧನೆ ನಡೆಸಿಕೊಂಡು ಬಂದಿದ್ದಾರೆ. ಇದೀಗ ಈ ವಿಜ್ಞಾನಿಗಳ ಸಂಶೋಧನೆ ಪ್ರಕಾರ ಲೀಥಿಯಂ ನಿಕ್ಷೇಪ ಇರುವುದು ಖಾತ್ರಿಯಾಗಿದೆ. ಈ ಭಾಗದ 150 ಎಕರೆ ಪ್ರದೇಶದಲ್ಲಿ ಲೀಥಿಯಂ ಇದೆ ಎಂದು ಸಹ ವಿಜ್ಞಾನಿಗಳು ಹೇಳಿದ್ದಾರೆ. ಇಲ್ಲಿರುವ ಲೀಥಿಯಂ ನಿಕ್ಷೇಪವನ್ನು ತೆಗೆಯಲು ಆಗುವ ಖರ್ಚು ಎಷ್ಟು ಮತ್ತು ಬೇರೆ ಕಡೆಯಿಂದ ಆಮದು ಮಾಡಿಕೊಳ್ಳಲು ಎಷ್ಟು ಖರ್ಚಾಗುತ್ತಿದೆ ಎಂಬುದರ ಬಗ್ಗೆ ಇದೀಗ ವಿಜ್ಞಾನಿಗಳು ಸಂಶೋಧನೆಗೆ ಮುಂದಾಗಿದ್ದಾರೆ.
ಒಂದು ವೇಳೆ ಇಲ್ಲಿನ ನಿಕ್ಷೇಪವನ್ನು ಬಳಕೆ ಮಾಡಬಹುದು ಎಂದು ವರದಿ ಬಂದರೆ ಮಂಡ್ಯ ಜಿಲ್ಲೆಗೆ ಜಾಗತಿಕ ಮಟ್ಟದಲ್ಲಿ ಹೆಸರು ಬರಲಿದೆ. ಸದ್ಯ ಭಾರತದಲ್ಲಿ ಲೀಥಿಯಂ ನಿಕ್ಷೇಪ ದೊರೆಯುವುದು ಗುಜರಾತ್ ಮತ್ತು ಛತ್ತೀಸ್ಘಡ ರಾಜ್ಯದ ಕೆಲ ಪ್ರದೇಶದಲ್ಲಿ ಮಾತ್ರ. ಈ ಎರಡು ರಾಜ್ಯದಲ್ಲಿ ಕಡಿಮೆ ಪ್ರಮಾಣದ ನಿಕ್ಷೇಪ ದೊರೆಯುತ್ತಿದೆ. ಆದರೆ ಶ್ರೀರಂಗಪಟ್ಟಣ ಭಾಗದಲ್ಲಿ ಈ ಎರಡು ರಾಜ್ಯಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಲೀಥಿಯಂ ನಿಕ್ಷೇಪ ಇದೆ ಎಂದು ವಿಜ್ಞಾನಿಗಳ ಸಂಶೋಧನೆಗಳ ಪ್ರಕಾರ ತಿಳಿದು ಬಂದಿದೆ.
ಓದಿ: ಸಕ್ಕರೆನಾಡು ಲಿಥಿಯಂ ನಾಡಾಗುವ ಕಾಲ ಸನ್ನಿಹಿತ: ಪರಿಸರ ಪ್ರೇಮಿಗಳು ಏನಂತಾರೆ?
ಮರಳಗಾಲ ಮತ್ತು ಅಲ್ಲಾಪಟ್ಟಣದಲ್ಲಿ ಈ ರೀತಿ ಅಪರೂಪದ ಲೋಹ ಸಿಗುತ್ತಿದೆ ಎಂದು ಖಾತ್ರಿಯಾದ ಮೇಲೆ ಕೆಲ ರೈತರು, ಇದು ನಮ್ಮ ಭೂಮಿ. ಇಲ್ಲಿ ನಾವು ವ್ಯವಸಾಯ ಮಾಡುತ್ತಿದ್ದೇವೆ. ಸೂಕ್ತವಾದ ಪರಿಹಾರವನ್ನು ಕೊಡಬೇಕು. ಇಲ್ಲವಾದಲ್ಲಿ ನಾವು ಭೂಮಿಯನ್ನು ಬಿಟ್ಟುಕೊಡುವುದಿಲ್ಲ ಎನ್ನುತ್ತಿದ್ದಾರೆ. ಆದರೆ ಜಿಲ್ಲಾಧಿಕಾರಿಗಳು ಇದು ಗೋಮಾಳದ ಜಾಗ. ಇದರ ಮೇಲೆ ಸರ್ಕಾರಕ್ಕೆ ಹಕ್ಕು ಇದೆ. ಈ ಬಗ್ಗೆ ಸೂಕ್ತ ನಿಲುವು ತೆಗೆದುಕೊಂಡು ಕೇಂದ್ರ ಸರ್ಕಾರಕ್ಕೆ ಬಿಟ್ಟುಕೊಡುವ ಕೆಲಸ ಮಾಡಲಾಗುತ್ತದೆ ಎಂದು ಹೇಳುತ್ತಿದ್ದಾರೆ.