ಮಂಡ್ಯ: ಪ್ರಸ್ತುತ ರಾಜಕೀಯ ವೃತ್ತಿಯಾಗಿದೆ. ಎಲ್ಲೂ ಸಿಗದ ಸೌಲಭ್ಯ ರಾಜಕೀಯದಲ್ಲಿ ಸಿಗುತ್ತೆ ಎಂದು
ಮದ್ದೂರಿನ ವಳಗೆರೆಹಳ್ಳಿ ಗ್ರಾಮದಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪ್ರಕರಣದ ಮರುತನಿಖೆ ಆದೇಶ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಾ, ಇದೊಂದು ಸಬ್ಜುಡೀಸ್ ಅಂತೇವೆ. ಕೋರ್ಟ್ನಲ್ಲಿ ಕೇಸ್ ಪೆಂಡಿಂಗ್ ಇದೆ. ಒಬ್ಬ ನಿವೃತ್ತ ನ್ಯಾಯಾಧೀಶನಾಗಿ ನಾನು ಮಾತನಾಡುವುದು ಸೂಕ್ತವಲ್ಲ ಎಂದರು.
ಐಟಿ ರೇಡ್ ಹಣ ಎಲ್ಲಿಗೆ ಹೋಗುತ್ತೆ? ಎಂಬ ವಿಚಾರಕ್ಕೆ, ಶಿಕ್ಷೆಯಾದ್ರೆ ಆ ಹಣ ಸರ್ಕಾರಕ್ಕೆ ಹೋಗುತ್ತದೆ. ಖುಲಾಸೆಯಾದ್ರೆ ವಾಪಸ್ ಸಂಬಂಧಿಸಿದವರಿಗೆ ಸಿಗುತ್ತದೆ ಎಂದು ಹೇಳಿದರು.
ಕಾವೇರಿ ನೀರಿನ ಹೋರಾಟದ ವಿಚಾರದ ಕುರಿತು ಮಾತನಾಡಿ, ಕಾವೇರಿ ನೀರು ಇಬ್ಬರಿಗೂ ಸಿಗುವುದಕ್ಕೆ ಸಾಧ್ಯವಿಲ್ಲ. ನೀರು ಸಾಕಷ್ಟು ಕಡಿಮೆ ಇದೆ. ಬೆಂಗಳೂರಿನ ಜನರಿಗೆ ಈ ನೀರಿನ ಅಗತ್ಯವಿದೆ. ಇದಕ್ಕೆ ಕೋರ್ಟ್ನಿಂದ ಪರಿಹಾರ ಸಿಗಲು ಸಾಧ್ಯವಿಲ್ಲ. ಇಂಡಿಪೆಂಡೆಂಟ್ ಕಮಿಟಿ ಮಾಡಿ ಕೋರ್ಟ್‌ಗೆ ಅರ್ಜಿ ಹಾಕಿ, ಪರಿಶೀಲನೆ ಮಾಡಿ ಎಂದು ಸಲಹೆ ನೀಡಿದರು. ನಮ್ಮಲ್ಲಿ ಹೆಚ್ಚು ನೀರು ಇದ್ರೆ ಅವರಿಗೆ ಕೊಡಲಿ. ಇಲ್ಲದಿದ್ದರೆ ಯಾಕೆ ಕೊಡಬೇಕು.? ಅವರಿಗೆ ನೀರು ಕೊಟ್ಟು ನಮ್ಮವರನ್ನು ಕೊಲ್ಲಲು ಸಾಧ್ಯವಿಲ್ಲ ಎಂದರು.
ಪ್ರಸ್ತುತ ರಾಜಕಾರಣದ ವಿಚಾರವಾಗಿ ಮಾತನಾಡುತ್ತಾ, ಈ ಹಿಂದೆ ರಾಜಕಾರಣ ಸೇವೆಯಾಗಿತ್ತು. ಇವತ್ತು ಒಂದು ವೃತ್ತಿಯಾಗಿದೆ. ಕೈತುಂಬಾ ಸಂಬಳ ಬರುತ್ತೆ. ಬಹಳಷ್ಟು ಜನ ರಾಜಕೀಯಕ್ಕೆ ಬರ್ತಿದ್ದಾರೆ. ನ್ಯಾಯಾಧೀಶರೂ ಬರ್ತಿದ್ದಾರೆ. ಐಎಎಸ್, ಐಪಿಎಸ್ ಅಧಿಕಾರಿಗಳೂ ರಾಜಕಾರಣಕ್ಕೆ ಬರ್ತಿದ್ದಾರೆ. ಇಲ್ಲಿ ಜಾಸ್ತಿ ಹಣ, ಅಧಿಕಾರ ಇದೆ. ಸೇವೆ ಮಾಡೋಕೆ ಅಲ್ಲ. ಸೌಲಭ್ಯಕ್ಕಾಗಿ ಬರ್ತಿದ್ದಾರೆ. ಎಲ್ಲೂ ಸಿಗದ ಸೌಲಭ್ಯ ರಾಜಕೀಯದಲ್ಲಿದೆ. ಬರಿ ಸೇವೆಯಾಗಬೇಕು. ಸೇವೆ ಮಾಡಲು ರಾಜಕೀಯಕ್ಕೆ ಬರಬೇಕು. ಯಾಕಂದ್ರೆ ಒಂದು ವರ್ಷದಲ್ಲಿ 100 ದಿನ ಅಸೆಂಬ್ಲಿ, ಪಾರ್ಲಿಮೆಂಟ್ನಲ್ಲಿ ಚರ್ಚೆ ಮಾಡಲ್ಲ. 12 ತಿಂಗಳು ಸಂಬಳ ಕೊಡ್ತಾರೆ, ಪೆನ್ಶನ್ ಕೊಡ್ತಾರೆ. ಅವರಿಂದ ಏನು ಸಹಾಯವಾಗ್ತಿದೆ ಅನ್ನೋದನ್ನು ಮತ ಹಾಕುವವರು ಪ್ರಶ್ನೆ ಮಾಡಿ ಎಂದು ತಿಳಿಸಿದರು.
ಇದನ್ನೂ ಓದಿ: ಮುಂದಿನ ಪೀಳಿಗೆ ಭ್ರಷ್ಟಾಚಾರವನ್ನು ಸಂಪೂರ್ಣ ತೊಡೆದುಹಾಕುವ ಭರವಸೆ ಇದೆ: ಸಂತೋಷ್ ಹೆಗ್ಡೆ