ಮಂಡ್ಯ: ನಟ ಡಾ.ಪುನೀತ್ ರಾಜ್ಕುಮಾರ್ ನಿಧನರಾಗಿ ಈಗಾಗಲೇ ಒಂದು ವರ್ಷ ಕಳೆದು ಹೋಗಿದೆ. ಅವರ ಹೆಸರಿನಲ್ಲಿ ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ಕಾರ್ಯಕ್ರಮಗಳು ನಡೆಯುತ್ತಿವೆ. ಅಂತೆಯೇ ಮಂಡ್ಯದಲ್ಲಿ ಮೂರು ದಿನಗಳ ಕಾಲ ಪುನೀತೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.
ಜಿಲ್ಲೆಯ ಪಾಂಡವಪುರ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ನಿನ್ನೆಯಿಂದ ಆರಂಭವಾದ ಪುನೀತೋತ್ಸವ ಕಾರ್ಯಕ್ರಮಕ್ಕೆ ನಟ ನಿಖಿಲ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪುನೀತ್ ಹಾಗೂ ಅಂಬರೀಶ್ ಅವರನ್ನ ಸ್ಮರಿಸಿದರು. ಸಂಜೆ 7 ಗಂಟೆ ಸುಮಾರಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಪುನೀತ್ ಅವರ ಮೂರು ಗೀತೆಗಳನ್ನು ಹಾಡುವ ಮೂಲಕ ನುಡಿ ನಮನ ಸಲ್ಲಿಸಲಾಯಿತು. ಈ ವೇಳೆ ವೇದಿಕೆ ಮುಂದೆ ನೆರೆದಿದ್ದ ಎಲ್ಲರೂ ಮೊಬೈಲ್ ನಲ್ಲಿ ಟಾರ್ಚ್ ಲೈಟ್ ಆನ್ ಮಾಡಿ ಅಪ್ಪು ಅವರನ್ನು ಸ್ಮರಿಸಿದರು.
ಗಾಯಕಿ ಅನನ್ಯ ಭಟ್ ಅವರ ನೇತೃತ್ವದಲ್ಲಿ ರಸಸಂಜೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ತಮ್ಮ ತಂಡದ ಜತೆಗೆ ವೇದಿಕೆಗೆ ಆಗಮಿಸಿದ ಅನನ್ಯ ಭಟ್ ಮಂಟೇಸ್ವಾಮಿ ಗೀತೆ, ಮಲೆಮಹದೇಶ್ವರ ಸ್ವಾಮಿ ಹಾಗೂ ಶಿವನನ್ನು ಕುರಿತ ಜಾನಪದ ಗೀತೆಗಳನ್ನ ಹಾಡಿ ರಂಜಿಸಿದರು.
ಇದಲ್ಲದೇ ನಟಿ ಸೋನುಗೌಡ ಹಾಗೂ ಕಿರುತೆರೆಯ ಹಲವು ನಟಿಯರು ಸುಪ್ರಸಿದ್ಧ ಕನ್ನಡ ಚಲನಚಿತ್ರ ಗೀತೆಗಳಿಗೆ ನೃತ್ಯ ಮಾಡಿ ನೆರೆದಿದ್ದ ಜನರ ಮನಸ್ಸನ್ನು ಸೆಳೆದರು. ಸುಮಾರು 3 ಗಂಟೆಗಳಿಗೂ ಹೆಚ್ಚುಕಾಲ ನಡೆದ ಮೊದಲ ದಿನದ ಪುನೀತೋತ್ಸವ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಒಟ್ಟಾರೆ ಪಾಂಡವಪುರ ಪಟ್ಟಣದಲ್ಲಿ ಆರಂಭವಾಗಿರುವ ಅಪ್ಪು ನೆನಪಿನ ಪುನೀತೋತ್ಸವ ಕಾರ್ಯಕ್ರಮ ಜನರ ಮನಸ್ಸನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಬಣ್ಣ ಬಣ್ಣ ವಿದ್ಯುತ್ ದೀಪಾಲಂಕಾರಗಳಿಂದ ಜಗಮಗಿಸುತ್ತಿರುವ ವೇದಿಕೆಯ ಜತೆಗೆ ಪಟ್ಟಣದ ಎಲ್ಲೆಂದರಲ್ಲಿ ಅಪ್ಪು ಫ್ಲೆಕ್ಸ್ ಹಾಗೂ ಬ್ಯಾನರ್ಗಳು ರಾರಾಜಿಸುವ ಮೂಲಕ ಹಬ್ಬದ ವಾತವರಣವನ್ನೇ ಸೃಷ್ಟಿಸಿದೆ.
ಇದನ್ನೂ ಓದಿ: ಪಾಂಡವಪುರದಲ್ಲಿ 3 ದಿನ ಪುನೀತೋತ್ಸವ: ಇಂದು ನಿಖಿಲ್ ಕುಮಾರಸ್ವಾಮಿ ಚಾಲನೆ