ಮಂಡ್ಯ: ನಗರದ ಐತಿಹಾಸಿಕ ಮೈ ಶುಗರ್ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲೇ ಉಳಿಯಬೇಕು. ಕಾರ್ಖಾನೆ ಆರಂಭಕ್ಕೆ ಸರ್ಕಾರ ಶೀಘ್ರ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಕಾರ್ಖಾನೆ ಎದುರು ಪ್ರತಿಭಟನೆ ನಡೆಸಿದರು.
ಕಾರ್ಖಾನೆಯನ್ನು ಸರ್ಕಾರವೇ ನಡೆಸಬೇಕು. ರಾಜ್ಯದ ಏಕಮಾತ್ರ ಸರ್ಕಾರಿ ಕಾರ್ಖಾನೆಯನ್ನು ಉಳಿಸಬೇಕು. ಮೈ ಶುಗರ್ ಕಾರ್ಖಾನೆ ಕಬ್ಬು ಬೆಳೆಗಾರರ ಜೀವನಾಡಿಯಾಗಿದ್ದು, ಸರ್ಕಾರಿ ಸ್ವಾಮ್ಯದಲ್ಲೇ ಉಳಿಯಲಿ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕಾರ್ಖಾನೆ ಅಂಗಳದಲ್ಲಿ ಇದುವರೆಗೆ ನಡೆದಿರುವ ಅಕ್ರಮಗಳ ತನಿಖೆಯಾಗಬೇಕು. ಖಾಸಗಿ ಗುತ್ತಿಗೆ ಕುರಿತು ಸರ್ಕಾರ ಹೊರಡಿಸಿರುವ ಆದೇಶ ರದ್ದುಪಡಿಸಬೇಕು. ಟೆಂಡರ್ ಪ್ರಕ್ರಿಯೆ ಕೈಬಿಡಬೇಕು. ಸುಸ್ಥಿತಿಯಲ್ಲಿರುವ ಒಂದು ಮಿಲ್ ಕಾರ್ಯಾರಂಭ ಮಾಡಿ, ಕಬ್ಬು ಅರೆಯಬೇಕು ಎಂದು ಒತ್ತಾಯಿಸಿದರು.
ಪರ್ಯಾಯ ಆಧುನಿಕ ಕಾರ್ಖಾನೆ ಸ್ಥಾಪಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಮೈ ಶುಗರ್ ಆಡಳಿತ ಮಂಡಳಿ ಗಟ್ಟಿಗೊಳಿಸಿ ಅಧಿಕಾರಶಾಹಿ ವ್ಯವಸ್ಥೆಯನ್ನು ನಿಯಂತ್ರಣಕ್ಕೆ ತಂದು ಭ್ರಷ್ಟಾಚಾರ ಮುಕ್ತಗೊಳಿಸಬೇಕು. ರೈತರು ಹಾಗೂ ಕಾರ್ಮಿಕರ ಭಾಗವಹಿಸುವಿಕೆ ಖಚಿತಪಡಿಸಬೇಕು ಎಂದು ಒತ್ತಾಯಿಸಿದರು.