ಮಂಡ್ಯ: ಗಣಪತಿ ನಿಮಜ್ಜನ ವೇಳೆ ಹಿಂದೂ ಸಂಘಟನೆ ಕಾರ್ಯಕರ್ತರಿಗೆ ಕೆ.ಆರ್.ಪೇಟೆ ಪಟ್ಟಣ ಠಾಣೆ ಪಿಎಸ್ಐ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು.
ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆ ಎದುರು ಜಮಾಯಿಸಿದ ಪ್ರತಿಭಟನಾಕಾರರು ಸಿಂದಘಟ್ಟ ಗ್ರಾಮದಲ್ಲಿ ಗಣಪತಿ ನಿಮಜ್ಜನ ವೇಳೆ ಹಿಂದೂ ಸಂಘಟನೆ ಕಾರ್ಯಕರ್ತರಿಗೆ ಪಟ್ಟಣ ಠಾಣೆಯ ಪಿಎಸ್ಐ ಬ್ಯಾಟರಾಯಗೌಡ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಜೊತೆಗೆ ಕಾರ್ಯಕರ್ತ ಸತೀಶ್ ಎಂಬುವರನ್ನು ಠಾಣೆಗೆ ಕರೆತಂದು ಹಲ್ಲೆ ನಡೆಸಿದ್ದಾರೆ. ಆದ್ದರಿಂದ ಪಿಎಸ್ಐ ಬ್ಯಾಟರಾಯಗೌಡ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಎಸ್ಪಿ ಭೇಟಿ:
ನಿನ್ನೆ ಬೆಳ್ಳಗೆಯಿಂದಲೇ ಠಾಣೆ ಮುಂದೆ ಪ್ರತಿಭಟನಾಕಾರರು ಜಮಾಯಿಸಿದ ಹಿನ್ನೆಲೆ ತಡರಾತ್ರಿ ಠಾಣೆಗೆ ಮಂಡ್ಯ ಎಸ್ಪಿ ಡಾ.ಅಶ್ವಿನಿ ಆಗಮಿಸಿ ಕಾರ್ಯಕರ್ತರನ್ನು ಮನವೊಲಿಸಲು ಪ್ರಯತ್ನಿಸಿದರು. ಈ ಕುರಿತು ವಿಚಾರಣೆ ನಡೆಸಿ ಕಾನ್ಸ್ಟೇಬಲ್ ರೆಹಮತ್ತುಲ್ಲಾಖಾನ್, ಪ್ರದೀಪ್ ರನ್ನ ಸಸ್ಪೆಂಡ್ ಮಾಡುವುದಾಗಿ ಹೇಳಿದರು. ಅಲ್ಲದೇ ಪಿಎಸ್ಐ ಬ್ಯಾಟರಾಯಗೌಡ ವಿರುದ್ಧ ಐಜಿ ಗೆ ದೂರು ನೀಡುವುದಾಗಿ ಭರವಸೆ ನೀಡಿದರು. ಎಸ್ಪಿ ಭರವಸೆ ನೀಡಿದ ಹಿನ್ನೆಲೆ ಹಿಂದೂ ಕಾರ್ಯಕರ್ತರು ಪ್ರತಿಭಟನೆ ಕೈಬಿಟ್ಟರು.