ಮಂಡ್ಯ: ಗೋ ಹತ್ಯೆ ನಿಷೇಧ ಕಾಯ್ದೆ ನಂತರ ಜಿಲ್ಲೆಯಲ್ಲಿ ಆಹಾರ ನೀರು ಸಿಗದೆ ಅಸ್ವಸ್ಥಗೊಂಡಿದ್ದ ಬಿಡಾಡಿ ಕರುಗಳ ಕರುಣಾಜನಕ ಸ್ಥಿತಿ ಕುರಿತು 'ಈಟಿವಿ ಭಾರತ' ವರದಿ ಮಾಡಿತ್ತು. ವರದಿ ಗಮನಿಸಿದ 'ಚೈತ್ರಾ ಗೋಶಾಲೆ' ಇದೀಗ ಅನಾಥ ಗಂಡು ಕರುಗಳ ರಕ್ಷಣೆಗೆ ನಿರ್ಧಾರ ಮಾಡಿದ್ದು, ಪುಟ್ಟ ಕರುಗಳಿಗೆ ಹಾಲುಣಿಸಿ ಪೋಷಣೆ ಮಾಡಲು ಮುಂದಾಗಿದೆ.
ಕೇಂದ್ರ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದ ನಂತರ, ರೈತರು ಗಂಡು ಕರುಗಳನ್ನ ಸಾಕಲೂ ಆಗದೆ, ಕಸಾಯಿ ಖಾನೆಗಳಿಗೆ ಮಾರಲೂ ಅವಕಾಶ ಸಿಗದೆ ಎಲ್ಲೆಂದರಲ್ಲಿ ಬಿಟ್ಟು ಹೋಗ್ತಿದ್ದಾರೆ. ಹೆಚ್ಚಾಗಿ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಗವಿರಂಗಪ್ಪನ ಗುಡಿ ಬಳಿ 20 ರಿಂದ 30 ಕರುಗಳನ್ನ ತಂದು ಬಿಟ್ಟಿದ್ದಾರೆ. ಒಳಿತಾಗಲೆಂದು ಪ್ರಾರ್ಥಿಸಿ ಹರಕೆ ಕಟ್ಟಿಕೊಳ್ಳುತ್ತಿದ್ದ ರೈತರು, ಗವಿರಂಗಪ್ಪನ ಗುಡಿಗೆ ಕರುಗಳನ್ನ ಅರ್ಪಿಸುವ ಸಂಪ್ರದಾಯ ಹೊಂದಿದ್ರು. ಆದ್ರೆ, ಗೋ ಹತ್ಯೆ ನಿಷೇಧ ಬಳಿಕ ಬಹುತೇಕ ರೈತರು ಗವಿರಂಗಪ್ಪನ ಗುಡಿ ಬಳಿ ರಾತ್ರೋ ರಾತ್ರಿ ಗಂಡು ಕರುಗಳನ್ನ ತಂದು ಬಿಟ್ಟಿದ್ದರಿಂದ ಆ ಕರುಗಳಿಗೆ ಹಾಲು, ಆಹಾರ ಸಿಗದೇ ನರಳಾಟಕ್ಕೆ ಸಿಲುಕಿದ್ದವು.
ಹುಟ್ಟಿದ ಒಂದು, ಎರಡು ದಿನಕ್ಕೆ ರೈತರು ಕರುಗಳನ್ನ ಬಿಟ್ಟು ಹೋಗ್ತಿದ್ದರಿಂದ ತಾಯಿ ಹಾಲಿನ ಪೋಷಣೆ ಸಿಗದೆ ಕರುಗಳು ಅಸ್ವಸ್ಥಗೊಂಡರೆ, ಮತ್ತೆ ಕೆಲವು ಪ್ರಾಣ ಬಿಟ್ಟು ನಾಯಿಗಳಿಗೆ ಆಹಾರವಾಗ್ತಿದ್ವು. ಈ ಮನಕಲಕುವ ಸ್ಟೋರಿ ಬಗ್ಗೆ ಈಟಿವಿ ಭಾರತ ವರದಿ ಮಾಡ್ತಿದ್ದಂತೆ, ಮಂಡ್ಯದ ಚೈತ್ರಾ ಗೋಶಾಲೆ ಅನಾಥ ಕರುಗಳಿಗೆ ಆಸರೆಯಾಗಿದೆ.
ಗೋ ಶಾಲೆಗೆ ಕರೆತರುವಾಗ ಅಡ್ಡಿ: ಫೆ.20 ರಂದು ಪ್ರಸಾರವಾದ ವರದಿ ಗಮನಿಸಿದ ಚೈತ್ರಾ ಗೋಶಾಲೆ ಸ್ವಯಂ ಸೇವಕರು ಅಧಿಕಾರಿಗಳಿಂದ ಅನುಮತಿ ಪಡೆದು ಗವಿರಂಗಪ್ಪನ ಗುಡಿ ಬಳಿ ತೆರಳಿದ್ದಾರೆ. ಅಲ್ಲಿದ್ದ ಕರುಗಳಿಗೆ ಮೊದಲು ಹಾಲುಣಿಸಿ ಆರೈಕೆ ಮಾಡಿದ್ದಾರೆ. ಬಳಿಕ ಕರುಗಳನ್ನ ಸಂರಕ್ಷಿಸಿ ಗೋ ಶಾಲೆಗೆ ಕರೆತರಲು ಮುಂದಾದಾಗ ಅವರಿಗೆ ಕೆಲವರು ಅಡ್ಡಿ ಮಾಡಿದ್ದಾರೆ. ಆಗ 'ನಾವು ಕರುಗಳನ್ನ ನೋಡಿಕೊಳ್ಳಲು ಮುಜರಾಯಿ ಇಲಾಖೆಯಿಂದ ಟೆಂಡರ್ ಪಡೆದಿದ್ದೇವೆ, ಕರುಗಳನ್ನ ಕೊಡಲ್ಲ' ಅಂತ ಜಗಳಮಾಡಿದ್ದಾರೆ. ಈ ವೇಳೆ ಪೋಲಿಸರ ಸಹಾಯ ಪಡೆದ ಗೋ ಶಾಲೆ ಸಿಬ್ಬಂದಿ ಬಿಡಾಡಿ ಕರುಗಳನ್ನು ರಕ್ಷಿಸಿ ತಮ್ಮ ಗೋಶಾಲೆಗೆ ಕರೆತಂದಿದ್ದಾರೆ.
ಓದಿ: ಮಂಡ್ಯ: ತಾಯಿಯ ಹಾಲು ಸಿಗದೆ ಕರುಗಳ ಸಾವು
ನಿಯಮಬಾಹಿರವಾಗಿ ಟೆಂಡರ್ ನೀಡಿದ್ದಲ್ಲದೇ, ಕರುಗಳ ಪೋಷಣೆಗೆ ಯಾವ ಮೂಲಭೂತ ವ್ಯವಸ್ಥೆಯನ್ನೂ ಮಾಡದ ಮುಜರಾಯಿ ಇಲಾಖೆ ಅಧಿಕಾರಿಗಳ ವಿರುದ್ಧ ದೂರನ್ನು ನೀಡಿದ್ದಾರೆ.