ಮಂಡ್ಯ: ಇತ್ತೀಚಿನ ವರ್ಷಗಳಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಮರಳು ಸಿಗುವುದೇ ದೊಡ್ಡ ಸವಾಲಾಗಿದೆ. ಸಿಕ್ಕರೂ ಸಾವಿರಾರು ರೂಪಾಯಿ ವ್ಯಯಿಸಬೇಕಿದೆ. ಹೀಗಾಗಿಯೇ ಮರಳಿಗೂ ಚಿನ್ನದ ಬೆಲೆ ಬಂದಿದೆ. ಇದರಿಂದ ಹಳ್ಳಿ ಹಳ್ಳಿಗೂ ಮರಳು ಮಾಫಿಯಾ ಹರಡಿಕೊಂಡಿದೆ.
ಇದೀಗ ಸಕ್ಕರೆ ನಾಡು ಮಂಡ್ಯದಲ್ಲಿ ಫಿಲ್ಟರ್ ಮರಳು ದಂಧೆ ಆರೋಪ ಕೇಳಿ ಬಂದಿದೆ. ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ತಾಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿರುವ ಕಿರಬನಕಟ್ಟೆ ಕೆರೆ ಬಳಿ ಹಲವು ವರ್ಷಗಳಿಂದ ಮರಳು ಫಿಲ್ಟರ್ ದಂಧೆ ನಡೆಸಲಾಗ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಕೆರೆ ಪಕ್ಕದ ತಮ್ಮ ಜಮೀನಿಗೆ ರಾಶಿ ರಾಶಿ ಮಣ್ಣನ್ನ ಹೊರಗಿನಿಂದ ತಂದು ಶೇಖರಣೆ ಮಾಡಿ ಬಳಿಕ ಕೆರೆ ದಡದಲ್ಲಿ ಗುಂಡಿ ನಿರ್ಮಿಸಿ ಅಲ್ಲಿ ಮಣ್ಣನ್ನು ಫಿಲ್ಟರ್ ಮಾಡಲಾಗುತ್ತಿದೆ.
ಪ್ರತಿನಿತ್ಯ ಫಿಲ್ಟರ್ ಆಗುವ ಮರಳನ್ನು 20ಕ್ಕೂ ಟ್ರಾಕ್ಟರ್‌ಗಳಲ್ಲಿ ಮಂಡ್ಯ, ರಾಮನಗರ, ಬೆಂಗಳೂರು ನಗರಗಳಿಗೆ ರವಾನಿಸುವ ಮೂಲಕ ಲಕ್ಷಾಂತರ ಹಣ ಸಂಪಾದಿಸುತ್ತಿದ್ದಾರೆ ಎನ್ನಲಾಗಿದೆ.
ಫಿಲ್ಟರ್ ಮರಳಿನಿಂದ ಮನೆ ತನ್ನ ಆಯಸ್ಸು ಕಳೆದುಕೊಳ್ಳುವ ಜೊತೆಗೆ ಕೆಲವೇ ವರ್ಷಗಳಲ್ಲಿ ಶಿಥಿಲವಾಗುವ ಸಾಧ್ಯತೆ ಹೆಚ್ಚು ಎಂಬುದು ತಜ್ಞರ ವಾದವಾಗಿದೆ. ಕೆರೆ ಬಳಿ ನಡೆಯುತ್ತಿರುವ ಈ ದಂಧೆಯಿಂದಾಗಿ ಸ್ಥಳೀಯ ರೈತರಿಗೂ ತಲೆನೋವಾಗಿದೆ. ಹೊರಗಿನಿಂದ ತಂದ ರಾಶಿ ರಾಶಿ ಮಣ್ಣನ್ನು ಕೆರೆ ದಡದಲ್ಲಿಯೇ ಬಿಡುವುದರಿಂದ ಕೆರೆಗೂ ಸಂಚಕಾರ ಬಂದೊದಗುವ ಭೀತಿ ಎದುರಾಗಿದೆ.
ಇದೀಗ ಅಕ್ರಮವಾಗಿ ಫಿಲ್ಟರ್ ಮರಳು ದಂಧೆ ನಡೆಸುತ್ತಿದ್ದ ಸ್ಥಳದ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಹಲವು ಟ್ರ್ಯಾಕ್ಟರ್ ಮರಳು ವಶಕ್ಕೆ ಪಡೆದಿದ್ದು, ಕ್ರಿಮಿನಲ್ ಕೇಸ್ ದಾಖಲಾಗಿದೆ.
ಇದನ್ನೂ ಓದಿ: ಮನ್ಮುಲ್ನಲ್ಲಿ ಮತ್ತೊಂದು ದಂಧೆ ಶಂಕೆ: ಅಧಿಕಾರಿಗಳ ಮೇಲೆ ರೈತರ ಆಕ್ರೋಶ