ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲೂಕಿನ ಸಂಬಂಧಿಕರ ಮನೆಗೆ ಬಂದಿದ್ದ 56 ವರ್ಷದ ವ್ಯಕ್ತಿಯೋರ್ವ ಮೃತಪಟ್ಟಿದ್ದಾರೆ. ಇದರಿಂದ ಆತಂಕಗೊಂಡ ಗ್ರಾಮಸ್ಥರು ಆತನ ಶವವನ್ನು ಬಿಟ್ಟು ಗ್ರಾಮವನ್ನೇ ತೊರೆದಿದ್ದಾರೆ.
ಮೂಲತಃ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಮುಸುಕಿನ ಕೊಪ್ಪಲು ಗ್ರಾಮದ ನಿವಾಸಿಯಾಗಿರುವ ಈ ವ್ಯಕ್ತಿ, ಬೆಂಗಳೂರಿನ ದಾಸರಾಯನಪುರ ವ್ಯಾಪ್ತಿಯ ಅಗ್ರಹಾರದಲ್ಲಿ ಬದುಕು ಕಟ್ಟಿಕೊಂಡಿದ್ದರು. ಉಸಿರಾಟ ಸಮಸ್ಯೆ ತೀವ್ರಗೊಂಡ ಹಿನ್ನೆಲೆ, ಕೆಲ ದಿನಗಳ ಹಿಂದೆ ಬೆಂಗಳೂರಿನಿಂದ ಬಾಡಿಗೆ ವಾಹನದಲ್ಲಿ ತನ್ನ ಸ್ವಗ್ರಾಮ ಮುಸುಕಿನ ಕೊಪ್ಪಲಿಗೆ ಆಗಮಿಸಿದ್ದರು. ಆದರೆ ಕೊರೊನಾ ಭೀತಿ ಹಿನ್ನೆಲೆ, ಗ್ರಾಮಸ್ಥರು ವ್ಯಕ್ತಿಯ ಪ್ರವೇಶಕ್ಕೆ ಅವಕಾಶ ನೀಡಿರಲಿಲ್ಲ. ಹೀಗಾಗಿ, ಮಳವಳ್ಳಿ ತಾಲೂಕಿನ ಹೊನಗನಹಳ್ಳಿ ಗ್ರಾಮದ ತನ್ನ ಸಂಬಂಧಿ ಮನೆಗೆ ಆಗಮಿಸಿದ್ದರು.
ಮಂಗಳವಾರ ತಡರಾತ್ರಿ ಈತ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದು, ಸಂಬಂಧಿಕರು ಮನೆ ಮುಂದಿನ ಪಡಸಾಲೆಯಲ್ಲೇ ಶವವನ್ನ ಬಿಟ್ಟು ಗ್ರಾಮ ತೊರೆದಿದ್ದಾರೆ. ಬಳಿಕ ಈ ಶವವನ್ನ ನೋಡಿದ ಗ್ರಾಮಸ್ಥರು, ಸ್ಥಳೀಯ ಪಂಚಾಯಿತಿ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿ ಗ್ರಾಮ ತೊರೆದಿದ್ದಾರೆ.
ವಿಷಯ ತಿಳಿದ ಅಧಿಕಾರಿಗಳು ಸಂಜೆ ವೇಳೆಗೆ ಗ್ರಾಮಕ್ಕೆ ಆಗಮಿಸಿ ಶವವನ್ನು ವಶಕ್ಕೆ ಪಡೆದುಕೊಂಡಿದ್ದು, ಕೋವಿಡ್-19 ನಿಯಮಾವಳಿ ಅನ್ವಯ ಸಂಸ್ಕಾರ ಮಾಡಲು ಕೊಳ್ಳೇಗಾಲ ತಾಲೂಕು ಆಡಳಿತಕ್ಕೆ ಹಸ್ತಾಂತರ ಮಾಡಲಿದ್ದಾರೆ. ಮೃತ ವ್ಯಕ್ತಿಯ ಕೊರೊನಾ ಪರೀಕ್ಷೆ ಮಾಡಿಸಿಲ್ಲ. ಆದರೆ, ಮುನ್ನೆಚ್ಚರಿಕೆ ಕ್ರಮವಾಗಿ ಕೋವಿಡ್-19 ನಿಯಮಾವಳಿ ಅನ್ವಯ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.