ಮಂಡ್ಯ : ಕೆಲವರು ಚೀಪ್ ಪಬ್ಲಿಸಿಟಿಗೋಸ್ಕರ ಈ ರೀತಿ ಹೇಳಿಕೆ ನೀಡುತ್ತಾರೆ ಎಂದು ನಟ ಚೇತನ್ ಅಹಿಂಸಾ ಹೇಳಿಕೆಗೆ ಪೇಜಾವರ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಮದ್ದೂರು ತಾಲೂಕಿನ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಕೆಲವರು ಚಿಲ್ಲರೆ ಪಬ್ಲಿಸಿಟಿಗೋಸ್ಕರ ಸಮಾಜದಲ್ಲಿ ಅಶಾಂತಿ ಉಂಟು ಮಾಡಲು ಈ ರೀತಿಯ ಹೇಳಿಕೆಗಳನ್ನು ನೀಡುತ್ತಾರೆ. ಇವರ ಹೇಳಿಕೆಗಳಲ್ಲಿ ಯಾವುದೇ ಮೌಲ್ಯಗಳಿರುವುದಿಲ್ಲ. ಪ್ರಚಾರಕ್ಕಾಗಿ ಈ ರೀತಿಯಾದಂತಹ ಹೇಳಿಕೆಗಳನ್ನು ನೀಡುತ್ತಾರೆ. ಇದಕ್ಕೆಲ್ಲ ನಾವು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಹಿಂದೂ ಸಮಾಜದ ಒಂದು ಭಾಗ ಬ್ರಾಹ್ಮಣ್ಯ : ಇನ್ನು, ಬೇರೆಯವರ ನಂಬಿಕೆ ಆಚರಣೆಗಳನ್ನು ವಿರೋಧಿಸುವುದು ತಪ್ಪು. ಅವರು ಯಾವ ನೆಲೆಯಲ್ಲಿ ಮಾತನಾಡುತ್ತಿದ್ದಾರೋ ನನಗೆ ಅರ್ಥವಾಗುತ್ತಿಲ್ಲ. ಹಿಂದುತ್ವ ಹಾಗೂ ಬ್ರಾಹ್ಮಣತ್ವ ಬೇರೆ ಬೇರೆ ಅಲ್ಲ. ಹಿಂದುತ್ವ ವಿಶಾಲವಾಗಿದ್ದು, ಅದರೊಳಗೆ ಬ್ರಾಹ್ಮಣತ್ವವು ಬರುತ್ತದೆ. ಹಿಂದೂ ಸಮಾಜದ ಒಂದು ಭಾಗ ಬ್ರಾಹ್ಮಣ್ಯ ಎಂದು ಶ್ರೀಗಳು ಹೇಳಿದರು.
ಚೇತನ್ ಅಹಿಂಸಾ ಹೇಳಿಕೆ : ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ರಿಷಬ್ ಶೆಟ್ಟಿ ಹೇಳಿಕೆ ನೀಡಿದ್ದು, ಇದು ನಿಜವಲ್ಲ ಎಂದು ನಟ ಚೇತನ್ ಹೇಳಿದ್ದರು.
ಕಾಂತಾರ ಸಿನಿಮಾ ವೀಕ್ಷಿಸಿದ ಅವರು ತಮ್ಮ ಟ್ವೀಟ್ನಲ್ಲಿ 'ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರಿದ್ದು ಎಂದು ರಿಷಭ್ ಶೆಟ್ಟಿ ಹೇಳಿದ್ದಾರೆ. ಅದು ನಿಜವಲ್ಲ. ನಮ್ಮ ಪಂಬದ/ನಲಿಕೆ/ಪರವರ ಬಹುಜನ ಸಂಪ್ರದಾಯಗಳು ವೈದಿಕ ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತಲೂ ಹಿಂದಿನದ್ದಾಗಿದೆ. ಮೂಲ ನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲಾಗಲಿ ಅದರಾಚೆಯಾಗಲಿ ಸತ್ಯ ಸಂಗತಿಗಳೊಂದಿಗೆ ತೋರಿಸಬೇಕು ಎಂದು ಕೇಳುತ್ತೇವೆ ಎಂದು ಬರೆದಿದ್ದರು.
ಇದನ್ನೂ ಓದಿ : ಚೇತನ್ ಯಾರು ನಮಗೆ ಸರ್ಟಿಫಿಕೇಟ್ ಕೊಡುವುದಕ್ಕೆ?: ದಯಾನಂದ ಕತ್ತಲ್ ಸಾರ್