ಮಂಡ್ಯ: ಮೈ ಶುಗರ್ ಆರಂಭದ ಗೊಂದಲದ ನಡುವೆಯೂ ಇಂದು ನಡೆದ ಷೇರುದಾರರ ಮಹಾಸಭೆ ಕೂಡ ಗೊಂದಲದಲ್ಲೇ ಮುಕ್ತಾಯವಾಯಿತು.
ಷೇರುದಾರರ ಸಭೆಯನ್ನು ಕಾರ್ಖಾನೆ ಆವರಣದಲ್ಲಿ ಆಯೋಜನೆ ಮಾಡಲಾಗಿತ್ತು. ಪ್ರಮುಖ ವಿಷಯಗಳ ಕುರಿತು ಚರ್ಚೆ ಕೂಡ ನಡೆಯಬೇಕಾಗಿತ್ತು. ಆದರೆ ಮೈ ಶುಗರ್ ಕಾರ್ಖಾನೆಯನ್ನು ಸರ್ಕಾರವೇ ಮಾಡಬೇಕು ಎಂದು ಹೋರಾಟ ಮಾಡುತ್ತಿರುವ ಮುಖಂಡರು ಸಭೆಗೆ ಆಗಮಿಸಿ ಪ್ರತಿಭಟನೆ ಶುರು ಮಾಡಿದರು. ಸಭೆ ಆರಂಭದಲ್ಲೇ ಪ್ರತಿಭಟನೆ ನಡೆದ ಹಿನ್ನೆಲೆ ವಿಡಿಯೋ ಕಾನ್ಫರೆನ್ಸ್ ರದ್ದು ಮಾಡಿ ಷೇರುದಾರರ ಸಭೆ ಮುಂದೂಡಲಾಯಿತು.
ಸಭೆ ಆರಂಭವಾಗುತ್ತಿದ್ದಂತೆ ಸುನಂದಾ ಜಯರಾಂ, ಎಂ.ಬಿ.ಶ್ರೀನಿವಾಸ್, ಕೃಷ್ಣೇಗೌಡ ಸೇರಿದಂತೆ ಹಲವರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.
ಮೈ ಶುಗರ್ ಕಾರ್ಖಾನೆ ಷೇರುದಾರರ ಅಭಿಪ್ರಾಯಕ್ಕಾಗಿ ಸಭೆ ಏರ್ಪಡಿಸಲಾಗಿತ್ತು. ಸಭೆಯಲ್ಲಿ ಪ್ರಮುಖವಾಗಿ ಮೂರು ವಿಚಾರಗಳ ಬಗ್ಗೆ ಚರ್ಚೆ ಮಾಡಬೇಕಾಗಿತ್ತು. ಇದರ ಜೊತೆಗೆ ಒ ಅಂಡ್ ಎಂ ವಿಚಾರವಾಗಿಯೂ ರೈತರ ಅಭಿಪ್ರಾಯ ಸಂಗ್ರಹ ಮಾಡಬೇಕಾಗಿತ್ತು. ಆದರೆ ಸಭೆ ಆರಂಭದಲ್ಲೇ ಪ್ರತಿಭಟನೆ ನಡೆದ ಕಾರಣ ಸಭೆಯನ್ನು ರದ್ದು ಮಾಡಲಾಯಿತು.