ಮಂಡ್ಯ: ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಮಂಡ್ಯದಲ್ಲಿ ಆಕ್ಸಿಜನ್ ಪ್ಲಾಂಟ್ ಸ್ಥಾಪನೆಗೆ ಸರ್ಕಾರ ಅನುಮತಿ ನೀಡಿದ್ದು, ಶೀಘ್ರದಲ್ಲಿ ಘಟಕ ಆರಂಭಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ ನಾರಾಯಣಗೌಡ ಹೇಳಿದರು.
ಮಂಡ್ಯದ ಮಿಮ್ಸ್ ಬಳಿ ಆಕ್ಸಿಜನ್ ಪ್ಲಾಂಟ್ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಇಷ್ಟು ದಿನ ಬೇರೆ ಕಡೆಯಿಂದ ಆಕ್ಸಿಜನ್ ತರಿಸಿಕೊಳ್ತಿದ್ದೆವು. ಮುಂದೆ ಈ ಸಮಸ್ಯೆ ಸಂಭವಿಸುವುದಿಲ್ಲ. ಈ ನಿಟ್ಟಿನಲ್ಲಿ ನಮ್ಮ ಪ್ರತಿ ತಾಲ್ಲೂಕಿನಲ್ಲೂ ಆಕ್ಸಿಜನ್ ಪ್ಲಾಂಟ್ ನಿರ್ಮಾಣವಾಗಬೇಕು ಎಂದು ಅವರು ಹೇಳಿದರು.
ಆಕ್ಸಿಜನ್ ಸಮಸ್ಯೆಗಳನ್ನು ಸರಿದೂಗಿಸಲು ಮತ್ತು ಆಕ್ಸಿಜನ್ ಬೆಡ್ ಸಮಸ್ಯೆ ಸರಿಪಡಿಸಲು ಬಸ್ನಲ್ಲಿ 6 ರಿಂದ 8 ಜನಕ್ಕೆ ಆಕ್ಸಿಜನ್ ಕೊಡುವ ಹೊಸ ಯೋಜನೆ ಮಾಡಲಾಗಿದೆ. ಸೋಂಕಿತರ ತುರ್ತು ಚಿಕಿತ್ಸೆಗಾಗಿ ಮೊಬೈಲ್ ಆಕ್ಸಿಜನ್ ಬಸ್ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಈಗಾಗಲೇ ಚಾಲನೆ ನೀಡಿದ್ದಾರೆ. ಇದನ್ನು ಜಿಲ್ಲೆಯಲ್ಲಿ ಜಾರಿಗೆ ತರಲು ಸಿಎಂ ಜೊತೆ ಮಾತನಾಡಿ ಮನವಿ ಮಾಡಿದ್ದೇವೆ ಎಂದರು.
ಎಲ್ಲರೂ ಸಹ ಕಡ್ಡಾಯವಾಗಿ ಕೊರೊನಾ ನಿಯಮ ಪಾಲನೆ ಮಾಡಿ ಎಂದು ಸಚಿವರು ಇದೇ ವೇಳೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಶಾಸಕ ಎಂ.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ನಗರಸಭೆ ಅಧ್ಯಕ್ಷ ಮಂಜು ಹಾಗು ಮಿಮ್ಸ್ ನಿರ್ದೇಶಕ ಡಾ.ಹರೀಶ್ ಜೊತೆಗಿದ್ದರು.