ಮಂಡ್ಯ: ನೀವು ಆಶೀರ್ವಾದ ಮಾಡಿದ್ರಿಂದ ನಾನು 5 ವರ್ಷ ಸಿಎಂ ಆಗಿದ್ದೆ. ಯಾರಿಂದಲೂ ಛೀ, ಥೂ ಅನಿಸಿಕೊಂಡು ಅಧಿಕಾರ ಮಾಡಲಿಲ್ಲ, ನುಡಿದಂತೆ ನಡೆದಿದ್ದೇನೆ. ಕೊಟ್ಟ 158 ಭರವಸೆಗಳನ್ನೂ ನಮ್ಮ ಸರ್ಕಾರ ಈಡೇರಿಸಿದೆ. ಅದನ್ನೂ ಮೀರಿ 30ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೇನೆ. ಎಲ್ಲಾ ಜಾತಿಯ ಬಡವರಿಗೆ ಸೌಲಭ್ಯಗಳನ್ನು ನೀಡಿದ್ದೇನೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಮಂಡ್ಯ ತಾಲೂಕಿನ ತಿರುಮಲಾಪುರ ಗ್ರಾಮದಲ್ಲಿ ಹುಲಿಯೂರಮ್ಮ ದೇವಸ್ಥಾನ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಕೆಲವೇ ಜಾತಿಗಳಿಗೆ ಸೀಮಿತವಾಗಿ ನಾನು ಅಧಿಕಾರ ಮಾಡಿಲ್ಲ. ಅಕ್ಕಿ, ಹಾಲು, ಶೂ, ಸಮವಸ್ತ್ರವನ್ನು ಎಲ್ಲಾ ಧರ್ಮ, ಜಾತಿಯವರಿಗೂ ಕೊಟ್ಟಿದ್ದೇನೆ. ಇವತ್ತು ಎಲ್ಲವನ್ನೂ ಹಾಳು ಮಾಡ್ತಿದ್ದಾರೆ. ರಾಜ್ಯದಲ್ಲಿ 2 ವರ್ಷದಿಂದ ಸ್ಕಾಲರ್ ಶಿಪ್ ಕೊಟ್ಟಿಲ್ಲ. ಎಸ್ಸಿ ಮತ್ತು ಎಸ್ಟಿ ಮಕ್ಕಳು ನನ್ನ ಮುಂದೆ ದೂರುತ್ತಿದ್ದಾರೆ. ವಿದ್ಯಾಸಿರಿ ಕಾರ್ಯಕ್ರಮ ನಿಲ್ಲಿಸಿದ್ದಾರೆ ಎಂದು ದೂರಿದರು.
ಹೀಗಿದ್ರೂ ಎಸ್ಸಿ ಮತ್ತು ಎಸ್ಟಿಗಳ ಬಗ್ಗೆ ಮಾತನಾಡಲು ಇವರಿಗೆ ಯಾವ ನೈತಿಕತೆ ಇದೆ?. ಕೃಷಿ ಭಾಗ್ಯ ಕಾರ್ಯಕ್ರಮ ಕೂಡ ನಿಲ್ಲಿಸಿದ್ದಾರೆ. ಇವರು ಅಧಿಕಾರಕ್ಕೆ ಬಂದಿರೋದೇ ಹಿಂಬಾಗಿಲಿನಿಂದ. ಹಿಂಬಾಗಿಲಿನಿಂದ ಬಂದವರನ್ನು ಮುಂಭಾಗಲಿಂದಲೇ ಓಡಿಸೋಣ. ಇಂತಹವರು ಮತ್ತೆ ಅಧಿಕಾರಕ್ಕೆ ಬರಬೇಕಾ?. ನಾವು ಅಧಿಕಾರಕ್ಕೆ ಬಂದ್ರೆ ಜನೋಪಯೋಗಿ ಕೆಲಸ ಮಾಡ್ತೇವೆ.
ಮೈಶುಗರ್ ಕಾರ್ಖಾನೆಗೆ ಘೋಷಿಸಿದ ಅನುದಾನ ಕೊಡಲಿಲ್ಲ. ನಮ್ಮ ಸರ್ಕಾರ ಬಂದ್ರೆ ಫ್ಯಾಕ್ಟರಿ ಓಪನ್ ಮಾಡ್ತೀವಿ. ಜನರಿಗೆ ಉಪಯೋಗ ಆಗೋ ಯೋಜನೆ ತರ್ತೀವಿ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಬೊಮ್ಮಾಯಿ ಅವರೇ, ಆ 'ಲಂಚ'ದ ಬಗ್ಗೆ ತಾವು ಜನತೆಗೆ ಉತ್ತರಿಸಬೇಕು: ಕಾಂಗ್ರೆಸ್