ಮಂಡ್ಯ: ಕೋವಿಡ್ನಿಂದ ಮನೆ ಮಗ ಸಾವನ್ನಪ್ಪಿದ ಎರಡೇ ದಿನಕ್ಕೆ ತಂದೆ-ತಾಯಿಯೂ ಮೃತಪಟ್ಟಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಹೆಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಮ್ಮಯ್ಯಚಾರಿ (54) ಕೊರೊನಾದಿಂದ ಮೃತಪಟ್ಟ ಮಗ. ಕೆಂಪಾಚಾರಿ (84) ಮತ್ತು ಜಯಮ್ಮ (74) ಮಗನ ಸಾವಿನ ಸುದ್ದಿ ತಿಳಿದು ಆಘಾತಕ್ಕೀಡಾಗಿ ಕೊನೆಯುಸಿರೆಳೆದ ದಂಪತಿ.
ಇನ್ನು ತಮ್ಮಯ್ಯಚಾರಿ ಸಾವಿನ ಸುದ್ದಿ ಅರಗಿಸಿಕೊಳ್ಳುವ ಶಕ್ತಿ ಇಲ್ಲ ಎಂಬುದನ್ನ ಅರಿತ ಸಂಬಂಧಿಕರು ಅವರಿಗೆ ಗೊತ್ತಾಗದಂತೆ ತಾವೇ ಮುಂದೆ ನಿಂತು ಅಂತ್ಯ ಸಂಸ್ಕಾರ ನೆರವೇರಿಸಿ ಬಂದಿದ್ದರು. ಇದಾದ ಎರಡು ದಿನಕ್ಕೆ ಅದ್ಯಾರಿಂದಲೋ ಆ ಹಿರಿಜೀವಗಳಿಗೆ ಮಗ ಬದುಕಿಲ್ಲ ಎಂಬ ಸತ್ಯ ಗೊತ್ತಾಗುತ್ತಿದ್ದಂತೆ ಸ್ಥಳದಲ್ಲೇ ತಂದೆ-ತಾಯಿ ಇಬ್ಬರೂ ಪ್ರಾಣ ಬಿಟ್ಟಿದ್ದಾರೆ.
![mandya](https://etvbharatimages.akamaized.net/etvbharat/prod-images/kn-mnd-04-03-death-photo-ka10026_04052021115642_0405f_1620109602_719.jpg)
ಈ ಹಿಂದೆ ತಮ್ಮಯ್ಯಚಾರಿ ಕೊರೊನಾ ಟೆಸ್ಟ್ ಮಾಡಿಸಿದಾಗ ಸೋಂಕು ದೃಢಪಟ್ಟಿತ್ತು. ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೇ 1ರಂದು ಮೃತಪಟ್ಟಿದ್ದರು. ಈ ವಿಷಯವನ್ನ ಸಂಬಂಧಿಕರು ಕೆಂಪಚಾರಿ ಮತ್ತು ಜಯಮ್ಮ ದಂಪತಿಗೆ ತಿಳಿಸಿರಲಿಲ್ಲ. ಮಗ ಸತ್ತಿದ್ದರೂ ಬದುಕಿದ್ದಾನೆ ಎಂದು ಮುಚ್ಚಿಡುವುದಾದರೂ ಹೇಗೆ ಎಂದು ಯೋಚಿಸಿದ ಕೆಲ ಸಂಬಂಧಿಗಳು ನಿನ್ನೆ(ಸೋಮವಾರ) ಈ ವಿಷಯವನ್ನ ವೃದ್ಧ ತಂದೆ-ತಾಯಿಗೆ ತಿಳಿಸಿದ್ದಾರೆ. ಮಗನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಘಾತಕ್ಕೀಡಾದ ತಾಯಿ ಜಯಮ್ಮ ಕೊನೆಯುಸಿರೆಳೆದರು. ಇದಾದ ಕೆಲವೇ ಕ್ಷಣದಲ್ಲಿ ತಂದೆ ಕೆಂಪಾಚಾರಿಯೂ ಪ್ರಾಣ ಬಿಟ್ಟಿರುವುದು ಮನಕುಲುಕುವಂತಿದೆ.