ಮಂಡ್ಯ : ಈ ವರ್ಷ ಕನ್ನಡ ನಾಡಿನ ಜೀವನದಿ ಕಾವೇರಿ ಭರ್ತಿಯಾಗ್ತಾಳೋ, ಇಲ್ವೋ.. ಕುಡಿಯುವ ನೀರಿಗೆ ಹಾಹಾಕಾರ ಎದುರಾಗುತ್ತೋ ಏನೋ ಎಂಬ ಅನುಮಾನ ಮೂಡಿತ್ತು.
ಆದ್ರೆ, ಸೆಪ್ಟಂಬರ್, ಅಕ್ಟೋಬರ್ ತಿಂಗಳಿನಲ್ಲಿ ನಿರಂತರವಾಗಿ ಸುರಿದ ಉತ್ತಮ ಮಳೆಗೆ ಕೆಆರ್‌ಎಸ್ ಜಲಾಶಯ ಭರ್ತಿಯಾಗಿ ಆತಂಕವನ್ನೆಲ್ಲ ದೂರ ಮಾಡಿತ್ತು. ಇದೀಗ 90 ವರ್ಷದ ಜಲಾಶಯ ಇತಿಹಾಸದಲ್ಲೊಂದು ಅಪರೂಪದ ದಾಖಲೆ ಬರೆದಿದೆ.
ಅಪರೂಪದ ದಾಖಲೆ ಬರೆದ ಜೀವನಾಡಿ ಕಾವೇರಿ : 53 ದಿನ 124.80 ಗರಿಷ್ಠ ಮಟ್ಟವಿದ್ದ ಕೆಆರ್‌ಎಸ್ ಬೇಸಿಗೆಯಲ್ಲಿಯೂ ನೀರಿನ ಅಭಾವ ತಗ್ಗಿಸಲಿದ್ದಾಳೆ ಕಾವೇರಿ. ಹಳೆ ಮೈಸೂರು ಭಾಗದ ಜೀವನಾಡಿ ಕಾವೇರಿ ಈ ಬಾರಿ ತಡವಾಗಿ ಭರ್ತಿಯಾಗಿದ್ದಳು. ಆ ಮೂಲಕ ಮಂಡ್ಯ ರೈತರ ಮೊಗದಲ್ಲಿ ಸಂತಸವನ್ನ ತಂದಿದ್ದ ಕೆಆರ್‌ಎಸ್ ಜಲಾಶಯ ಹೊಸ ದಾಖಲೆ ಬರೆಯುವ ಮೂಲಕ ಜನರ ಮೊಗದಲ್ಲಿ ಸಂತಸ ಮೂಡಿಸಿದ್ದಾಳೆ.
ಸಕ್ಕರೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಕೆಆರ್‌ಎಸ್ ಡ್ಯಾಂ ಪ್ರತಿವರ್ಷ ಜುಲೈ, ಆಗಸ್ಟ್‌ನಲ್ಲಿ ತುಂಬುತ್ತಿದ್ದಳು. ಆದ್ರೆ, ಈ ಬಾರಿ ಸೆಪ್ಟಂಬರ್ ತಿಂಗಳಾದ್ರು ಡ್ಯಾಂ ಭರ್ತಿಯಾಗಿರಲಿಲ್ಲ. ಇದರಿಂದ ಬೇಸಿಗೆಯಲ್ಲಿ ಬೆಂಗಳೂರು ಸೇರಿದಂತೆ ಹಲವು ನಗರಗಳಿಗೆ ಕುಡಿಯುವ ಒದಗಿಸುವ, ತಮಿಳುನಾಡು ಹಾಗೂ ರಾಜ್ಯದ ರೈತರ ಬೆಳೆಗಳಿಗೆ ನೀರು ಒದಗಿಸುವ ಅನಿವಾರ್ಯತೆ ರಾಜ್ಯ ಸರ್ಕಾರಕ್ಕೆ ಎದುರಾಗಿತ್ತು.
ಆ ಹಿನ್ನೆಲೆ ಕೃಷ್ಣರಾಜ ಅಣೆಕಟ್ಟೆ ಭರ್ತಿಯಾಗಲಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅಕ್ಟೋಬರ್ 7ರಂದು ಪೂಜೆ ನೆರವೇರಿಸಿದ್ರು. ಸಿಎಂ ಪೂಜೆಯ ಫಲವೋ, ಮಳೆರಾಯನ ಕೃಪೆಯೋ ಕಾವೇರಿ ಜಲಾನಯನ ಪ್ರದೇಶದಲ್ಲಿ ಅಕ್ಟೋಬರ್ ತಿಂಗಳು ಸುರಿದ ಧಾರಾಕಾರ ಮಳೆಗೆ ಅಕ್ಟೋಬರ್ ಅಂತ್ಯದಲ್ಲಿ ಡ್ಯಾಂ ಭರ್ತಿಯಾಗಿತ್ತು. ನವೆಂಬರ್ 2ರಂದು ಸಿಎಂ ಕಾವೇರಿಗೆ ಬಾಗಿನ ಕೂಡ ಅರ್ಪಿಸಿದ್ರು. ಅಂದಿನಿಂದ ಇಂದಿನವರೆಗೆ ಬರೋಬ್ಬರಿ 53 ದಿನಗಳ ಕಾಲ ಕೆಆರ್‌ಎಸ್ ಡ್ಯಾಂ ಸಂಪೂರ್ಣ ಭರ್ತಿಯಾಗುವ ಮೂಲಕ ಕಾವೇರಿ ಇತಿಹಾಸ ನಿರ್ಮಿಸಿದ್ದಾಳೆ.
ಇದನ್ನೂ ಓದಿ: ಚೆನ್ನಮ್ಮ ವೃತ್ತದಲ್ಲಿಯೂ ರಾಜಕೀಯ ಪ್ರಚಾರ : ಅವಳಿನಗರದಲ್ಲಿ ಬಿಜೆಪಿ ಬಾವುಟದ ಕಲರವ
ಡ್ಯಾಂನ ಗರಿಷ್ಠ ನೀರಿನ ಮಟ್ಟ 124.80 ಅಡಿಗಳಿವೆ. ಅಕ್ಟೋಬರ್ 29 ರಿಂದ ಡಿ.23ರವರೆಗೆ ಸಂಪೂರ್ಣ ಭರ್ತಿಯೇ ಇತ್ತು. ಆ ಮೂಲಕ ಡ್ಯಾಂನ 90 ವರ್ಷದ ಇತಿಹಾಸದಲ್ಲಿ ನಿರಂತರವಾಗಿ 53 ದಿನಗಳ ಕಾಲ ಸಂಪೂರ್ಣ ಭರ್ತಿಯಾಗಿ ಇತಿಹಾಸ ನಿರ್ಮಿಸಿದೆ. ಇದರಿಂದ ಬೇಸಿಗೆ ಸಮಯದಲ್ಲಿ ತಲೆದೋರುತ್ತಿದ್ದ ಕುಡಿಯುವ ನೀರಿನ ಅಭಾವವು ಈ ಬಾರಿ ಉಂಟಾಗುವುದಿಲ್ಲ ಎನ್ನಲಾಗ್ತಿದೆ.
ಅಷ್ಟೇ ಅಲ್ಲ, ಹಳೆ ಮೈಸೂರು ಭಾಗದ ಕಾವೇರಿ ಜಲಾನಯನ ಪ್ರದೇಶದಲ್ಲಿನ ಸಾವಿರಾರು ಹೆಕ್ಟೇರ್ ರೈತರ ಜಮೀನಿಗೆ ಹಾಗೂ ತಮಿಳುನಾಡಿಗೆ ನಿಗದಿಪಡಿಸಿರುವ ನೀರು ಹರಿಸಲು ಯಾವುದೇ ತೊಂದರೆಯಾಗಲ್ಲ. ಅಲ್ಲದೇ ಇಂದು ಕೂಡ ಕೆಆರ್‌ಎಸ್‌ನಲ್ಲಿ 124.28 ಅಡಿ ನೀರು ಸಂಗ್ರಹವಾಗಿರುವುದು ರೈತರು ನಿಟ್ಟುಸಿರು ಬಿಟ್ಟಿದ್ದಾರೆ.
ಕಾವೇರಿ ತಾಯಿ ಒಡಲು ಇಂದಿಗು ತುಂಬಿ ತುಳುಕುತ್ತಿದ್ದು, ಇತಿಹಾಸ ನಿರ್ಮಿಸುವ ಜೊತೆಗೆ ಪ್ರತಿವರ್ಷ ಉಂಟಾಗುತ್ತಿದ್ದ ನೀರಿನ ಅಭಾವವನ್ನು ದೂರ ಮಾಡಿದ್ದಾಳೆ ಎಂದರೆ ತಪ್ಪಾಗಲಾರದು.