ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಖಂಡಿಸಿ ಮಂಡ್ಯದಲ್ಲಿ ರೈತರ ಕಾವೇರಿ ಹೋರಾಟದ ಕಿಚ್ಚು ಹೆಚ್ಚಾಗಿದೆ. ಇಂದು ಪ್ರತಿಭಟನೆಯಲ್ಲಿ ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಚಿತ್ರನಟ ಅಭಿಷೇಕ್ ಅಂಬರೀಶ್, ಕನ್ನಡ ಸಾಹಿತ್ಯ ಪರಿಷತ್ನ ರಾಜ್ಯಾಧ್ಯಕ್ಷರಾದ ಮಹೇಶ್ ಜೋಶಿ, ಮಾಜಿ ಸಚಿವ ಸಿ.ಎಸ್ ಪುಟ್ಟರಾಜು ಸೇರಿದಂತೆ ಹಲವರು ಪಾಲ್ಗೊಂಡಿದರು.
ನಂತರ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ನಿರ್ಮಲಾನಂದನಾಥ ಸ್ವಾಮೀಜಿ, ಹಲವಾರು ದಶಕಗಳಿಂದ ಕಾವೇರಿ ಸಮಸ್ಯೆ ಹಾಗೆಯೇ ಉಳಿದಿದೆ. ಆದ್ಯತೆ ಮೇರೆಗೆ ಕುಡಿಯುವ ನೀರು ಕೊಡಬೇಕು. ಅನಂತರ ವ್ಯವಸಾಯಕ್ಕೆ, ಬಳಿಕ ಕೈಗಾರಿಕೆ ಮತ್ತು ಇತರೆ ಬಳಕೆಗೆ ಕೊಡಬೇಕು ಎಂದು ಹೇಳಿದರು. ತಮಿಳುನಾಡಿಗೆ ಪ್ರತಿವರ್ಷ 419 ಟಿಎಂಸಿ ನೀರು ಹಾಗೂ ಕರ್ನಾಟಕಕ್ಕೆ ಪ್ರತಿವರ್ಷ 270 ಟಿಎಂಸಿ ನಿಗದಿ ಮಾಡಲಾಗಿದೆ. ಆದರೆ, ಮಳೆ ಕಡಿಮೆ ಆದ ಸಂದರ್ಭದಲ್ಲಿ ಸಂಕಷ್ಟ ಸೂತ್ರ ರಚಿಸಬೇಕಿತ್ತು. ಈ ಭಾಗದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇದೆ. ಡ್ಯಾಂನಲ್ಲಿ ನೀರಿನ ಸಂಗ್ರಹ ತುಂಬಾ ಕಡಿಮೆ ಇದೆ. ಬೆಳೆ ಒಣಗುವುದು ಒಂದೆಡೆಯಾದರೆ ಮನುಷ್ಯನೂ ಒಣಗಿ ಹೋಗುತ್ತಾನೆ. ಮನುಷ್ಯನ ಅಸ್ಥಿತ್ವವೇ ಈಗ ಪ್ರಶ್ನೆ ಆಗಿದೆ. ನ್ಯಾಯಾಧೀಶರು ಆದೇಶ ನೀಡುವ ಮುನ್ನ ನಮ್ಮ ನೋವನ್ನು ಕೇಳಬೇಕಿತ್ತು ಎಂದು ಹೇಳಿದರು.
ಪ್ರತಿದಿನ 5 ಸಾವಿರ ಕ್ಯೂಸೆಕ್ ಹರಿಸಲಾಗಿದೆ. ಈಗ ಮತ್ತೆ 5 ಸಾವಿರ ಕ್ಯೂಸೆಕ್ 15 ದಿನ ಹರಿಸಲು ಸೂಚನೆ ನೀಡಿದ್ದಾರೆ. ಆದೇಶದಂತೆ ನೀರು ಹರಿದರೆ ಡ್ಯಾಂನಲ್ಲಿ ನೀರು ಉಳಿಯುವುದಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರ ನ್ಯಾಯಾಲಯದಲ್ಲಿ ಸರಿಯಾಗಿ ಮನವರಿಕೆ ಮಾಡಬೇಕು. ನಮ್ಮ ರೈತರ ಹಿತ ಕಾಯಬೇಕು. ಈಗಿನ ಆದೇಶ ಪಾಲನೆ ಮಾಡಬೇಕು. ಪಾಲನೆ ಮಾಡಿದ್ರೆ ರೈತರ ಬದುಕು ಬೀದಿಗೆ ಬರಲಿದೆ ಎಂದು ತಿಳಿಸಿದರು.
ಸದ್ಯ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಂತ್ರಿಗಳ ಜೊತೆ ನಾನು ಮಾತನಾಡ್ತೀನಿ. ಸಂಕಷ್ಟ ಸೂತ್ರಕ್ಕಾಗಿ ಒತ್ತಾಯಿಸುತ್ತೇನೆ. ಮೇಕೆದಾಟು ಯೋಜನೆ ಜಾರಿ ಮಾಡಬೇಕು. ಮಳೆ ಬಿದ್ದಾಗ ಹೆಚ್ಚುವರಿ ಸಂಗ್ರಹಿಸಿದ್ರೆ ಇಂತಹ ಕಷ್ಟ ಕಾಲದಲ್ಲಿ ಹರಿಸಬಹುದು. ಎರಡು ರಾಜ್ಯಗಳಿಗೂ ಮೇಕೆದಾಟು ಯೋಜನೆ ಸಹಕಾರಿ. ನಮ್ಮ ರೈತರು ಸುಖಾಸಮ್ಮನೆ ರಸ್ತೆಗೆ ಬರಲ್ಲ. ಬೀದಿಗೆ ಇಳಿದಿದ್ದಾನೆ ಎಂದರೆ ಆತನಿಗೆ ಕಷ್ಟ ಇದೆ ಎಂದರ್ಥ ಎಂದರು.
ಇವತ್ತಿನ ಕ್ಯಾಬಿನೆಟ್ ರೈತರ ಪರ ನಿರ್ಧಾರವಾಗಲಿ. ರೈತರ ಪರವಾಗಿ ಶ್ರೀಮಠ ಯಾವಾಗಲೂ ಇರುತ್ತದೆ. ನಮ್ಮನ್ನ ಯಾರು ಕರೆಯದೆ ಇದ್ರು ಬಂದಿದ್ದೇವೆ. ಇದು ನಮ್ಮ ಕರ್ತವ್ಯ. ಇಂತಹ ಸಂದರ್ಭದಲ್ಲಿ ದೇವೇಗೌಡರು, ಎಸ್ಎಂ ಕೃಷ್ಣ ಬರಬೇಕು. ರಾಜ್ಯ ಸರ್ಕಾರ ನಮ್ಮವರಿಗೆ ತೊಂದರೆ ಕೊಟ್ಟು ನೀರು ಹರಿಸಬಾರದು. ಕಾನೂನಾತ್ಮಕವಾಗಿ ಯಾವೆಲ್ಲಾ ಕ್ರಮ ತೆಗೆದುಕೊಳ್ಳಬಹುದು ಅದನ್ನು ಮಾಡಬೇಕು ಎಂದು ಹೇಳಿದರು.
ಇದೇ ವೇಳೆ, ನಟ ಅಭಿಷೇಕ್ ಅಂಬರೀಶ್ ಮಾತನಾಡಿ, ಯಾವುದೇ ರಾಜಕೀಯ ದೃಷ್ಟಿಯಿಂದ ಇಲ್ಲಿ ಬಂದಿಲ್ಲ. ನಾನು ಚಿಕ್ಕಂದಿನಿಂದಾಗಲೂ ಕಾವೇರಿ ಹೋರಾಟ ನೋಡಿ ಬೆಳೆದವನು. ಅಪ್ಪಾಜಿ, ಅಮ್ಮ ಎಲ್ಲರೂ ಕಾವೇರಿ ಪರ ಹೋರಾಟ ಮಾಡಿದ್ದಾರೆ. ದೆಹಲಿಯಲ್ಲಿ ಈ ಬಗ್ಗೆ ಚರ್ಚೆ ಮಾಡುವ ಕೆಲಸವನ್ನ ಅಮ್ಮ ಮಾಡ್ತಾರೆ. ನಮ್ಮ ನೀರು ಬಿಟ್ರೆ ಮುಂದೆ ಕುಡಿಯುವ ನೀರಿಗೂ ತೊಂದರೆ ಆಗುತ್ತೆ. ನಮ್ಮ ನೀರು, ಜನಕ್ಕೆ ನ್ಯಾಯ ಸಿಗಬೇಕು. ಕನ್ನಡ ಚಿತ್ರರಂಗ ಈ ವಿಚಾರದಲ್ಲಿ ಯಾವಾಗಲೂ ಇದ್ದೇ ಇರುತ್ತೆ. ಶೀಘ್ರದಲ್ಲೇ ಅದಕ್ಕೆ ಒಂದು ವೇದಿಕೆ ಸಿದ್ದವಾಗಲಿದೆ. ನಮ್ಮ ಬಳಿ ನೀರು ಇದ್ರೆ ತಮಿಳುನಾಡಿನವರು ನೀರು ಕೇಳಲಿ. ನಮ್ಮ ಬಳಿಯೇ ನೀರು ಇಲ್ಲದಿದ್ದಾಗ ಅವರಿಗೆ ನೀರು ಕೋಡೊದು ಹೇಗೆ?. ಎರಡೂ ರಾಜ್ಯ ಸರ್ಕಾರಗಳು ಕೂತು ಮಾತನಾಡಬೇಕು. ಕಾವೇರಿ ವಿವಾದಕ್ಕೆ ಶಾಶ್ವತ ಪರಿಹಾರ ಸಿಗಬೇಕು ಎಂದು ಹೇಳಿದರು.
ಇದನ್ನೂ ಓದಿ: ಕಾವೇರಿ ನೀರು ಹಂಚಿಕೆ ವಿವಾದ : ಮಂಡ್ಯ, ಚಾಮರಾಜನಗರದಲ್ಲಿ ಭುಗಿಲೆದ್ದ ರೈತರ ಆಕ್ರೋಶ, ಹೆದ್ದಾರಿ ತಡೆ