ಮಂಡ್ಯ : ಸತತ 4 ವರ್ಷಗಳಿಂದ ಸ್ಥಗಿತಗೊಂಡಿದ್ದ ಮೈ ಶುಗರ್ ಕಾರ್ಖಾನೆಯನ್ನು ಮತ್ತೆ ಪುನರಾರಂಭ ಮಾಡಲಾಗಿದೆ. ನಗರದಲ್ಲಿರುವ ಮೈ ಶುಗರ್ ಕಾರ್ಖಾನೆಯ ಕಾರ್ಯಾರಂಭಕ್ಕೆ ಸಚಿವ ಕೆ ಗೋಪಾಲಯ್ಯ , ಕೆ ಸಿ ನಾರಾಯಣಗೌಡ ಹಾಗೂ ಸಂಸದೆ ಸುಮಲತಾ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ, ರೈತರಿಗೆ ಅನುಕೂಲಕರವಾಗಿರುವ ಮೈ ಶುಗರ್ ಕಾರ್ಖಾನೆಯನ್ನು ಸರ್ಕಾರದ ವ್ಯಾಪ್ತಿಯಲ್ಲಿ ಲಾಭದಾಯಕವಾಗಿ ನಡೆಸಲು ಎಲ್ಲರೂ ಸಹಕರಿಸಬೇಕು. ಕಾರ್ಖಾನೆಯಲ್ಲಿ ಕಬ್ಬು ನುರಿಸುವ ಕಾರ್ಯಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಗಿದೆ. ಸಣ್ಣ ಪುಟ್ಟ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ಸರಿಪಡಿಸಲಾಗುವುದು. ಮೈ ಶುಗರ್ ಕಾರ್ಖಾನೆಯ ಪುನರಾರಂಭಕ್ಕೆ ಶ್ರಮಿಸಿದ ಮಾನ್ಯ ಮುಖ್ಯಮಂತ್ರಿಗಳು, ಚುನಾಯಿತ ಪ್ರತಿನಿಧಿಗಳು, ರೈತ ಸಂಘದವರು, ರೈತರಿಗೆ ಕೃತಜ್ಞತೆ ಅರ್ಪಿಸುತ್ತೇನೆ ಎಂದು ಹೇಳಿದರು.
ಈ ಭಾಗದ ರೈತರಿಗೆ ಹೆಚ್ಚು ಉಪಯುಕ್ತವಾಗುವ ಸಕ್ಕರೆ ಕಾರ್ಖಾನೆ ಇದಾಗಿದೆ. ಸುಮಾರು 4000 ಟನ್ ಕಬ್ಬು ನುರಿಸುವ ನಿರೀಕ್ಷೆ ಹೊಂದಿದ್ದು,ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು.
ಬಳಿಕ ಮಾತನಾಡಿದ ಸಂಸದೆ ಸುಮಲತಾ, ಹಲವು ವರ್ಷಗಳ ಹೋರಾಟಕ್ಕೆ ಫಲ ಸಿಕ್ಕಿದೆ. ಇವತ್ತು ಗಣೇಶ ಹಬ್ಬದ ದಿನ ನಮಗೆ ಉಡುಗೊರೆ ಕೊಟ್ಟಿದ್ದಾರೆ. ಕಾರ್ಖಾನೆಯನ್ನು ಪುನರಾರಂಭ ಮಾಡಬಾರದೆಂದು ಹಲವರು ಹೋರಾಟ ನಡೆಸಿದ್ದರು. ಅದನ್ನೆಲ್ಲ ಮೀರಿ ನಮ್ಮ ಮುಖ್ಯಮಂತ್ರಿಗಳು ಕಾರ್ಖಾನೆ ಪ್ರಾರಂಭ ಮಾಡಿದ್ದಾರೆ. ಎಲ್ಲರೂ ಕಾರ್ಖಾನೆಯ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.
ಇದನ್ನೂ ಓದಿ : ತಾಯಿಯ ಮರಣಾ ನಂತರ ನೇತ್ರದಾನ ಮಾಡಿ ಸಾರ್ಥಕತೆ ಮೆರೆದ ಮಗ