ಮಂಡ್ಯ: ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿದ್ದ ಸಂಸದೆ ಸುಮಲತಾ ಅಂಬರೀಶ್ ಅವರು ಸೋಮವಾರ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಮುರುಗೇಶ್ ನಿರಾಣಿ ಅವರೊಂದಿಗೆ ಮಂಡ್ಯದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿದರು.
ಮೊದಲು ಶ್ರೀರಂಗಪಟ್ಟಣ ತಾಲೂಕಿನ ಟಿ ಎಂ ಹೊಸೂರು ಸಮೀಪ ನಡೆಯುತ್ತಿರುವ ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿದರು. ಈ ವೇಳೆ ದಿಲೀಪ್ ಕನ್ಟ್ರಕ್ಷನ್ ಅವರು ನಡೆಸುತ್ತಿರುವ ಅಕ್ರಮ ಗಣಿಗಾರಿಕೆಯ ಬಗ್ಗೆ ಸಂಸದೆ ಸುಮಲತಾ ಅಂಬರೀಶ್ ಅವರು ಅಧಿಕಾರಿಗಳ ಬಳಿ ಇದ್ದ ಮಾಹಿತಿಯನ್ನು ಸಚಿವ ಮುರುಗೇಶ್ ನಿರಾಣಿ ಅವರಿಗೆ ನೀಡಲು ಸೂಚಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿಲೀಪ್ ಕನ್ಟ್ರಕ್ಷನ್ ಅವರು ಅಕ್ರಮವಾಗಿ ಮಾಡಿರುವ ಗಣಿಗಾರಿಕೆಯ ವರದಿ ತೆಗೆದುಕೊಂಡು ಅವರಿಗೆ ದಂಡ ವಿಧಿಸುವುದಾಗಿ ಮುರುಗೇಶ್ ನಿರಾಣಿ ಅವರು ತಿಳಿಸಿದರು. ಅಲ್ಲದೇ ರಾಜಧನ ಪಾವತಿ ಮಾಡದವರ ವಿರುದ್ಧ ಕ್ರಮಕೈಗೊಂಡು ಅವರಿಂದ ರಾಜಧನ ವಸೂಲಿ ಮಾಡುವುದಾಗಿ ಅವರು ತಿಳಿಸಿದರು.
ಓದಿ:ಸಿಸಿಟಿವಿಯಲ್ಲಿ ವಿಚಿತ್ರ ದೃಶ್ಯ ಸೆರೆ: ವಿಡಿಯೋ
ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ನಿಷೇಧಕ್ಕೆ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಸಂಬಂಧ ಅಧಿಕಾರಿಗಳು ನೀಡುವ ವರದಿ ಆಧರಿಸಿ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು. ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮಾಲೀಕರಿಗೆ ರಾಜಧನ ಕಟ್ಟಿ ಇಲ್ಲವೇ ಗಣಿಗಾರಿಕೆ ಸ್ಥಗಿತಗೊಳಿಸಿ ಈ ಸಂಬಂಧ ಅಧಿಕಾರಿಗಳು ಕ್ರಮವಹಿಸಿ ಎಂದು ಸೂಚಿಸಲಾಗಿದೆ.
ಸರ್ಕಾರ ಈಗಾಗಲೇ ಅಕ್ರಮ ಮರಳು ಸಾಗಾಣಿಕೆ ಮಾಡಿದವರಿಗೆ ದಂಡ ವಿಧಿಸಿದೆ. ಕೇವಲ ಆಶ್ರಯ ಮನೆ ಕಟ್ಟುವವರಿಗೆ ಮಾತ್ರ ಮರಳು ಪಡೆಯಲು ಅವಕಾಶ ಮಾಡಿಕೊಟ್ಟಿದೆ. ಆದರೆ, ಅಕ್ರಮವಾಗಿ ಎತ್ತಿನಗಾಡಿಯಲ್ಲಿ ಸಾಗಿಸಿ ಬೇರೆಯವರಿಗೆ ಮಾರಾಟ ಮಾಡುವವರಿಗೂ ದಂಡ ವಿಧಿಸಿದ್ದೇವೆ ಎಂದರು.