ಮಂಡ್ಯ: ಮಂಡ್ಯದಲ್ಲಿ ದಿನೇ ದಿನೇ ಕಾವೇರಿ ಹೋರಾಟದ ಕಿಚ್ಚು ಹೆಚ್ಚಾಗಿದೆ. ಇಂದು ಕೂಡ ರೈತರ ಹೋರಾಟ ಮುಂದುವರೆದಿದೆ. ರೈತರು ನಡೆಸುತ್ತಿರುವ ಧರಣಿಗೆ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಸಾಥ್ ನೀಡಿದ್ದಾರೆ. ಬಳಿಕ, ಮಂಡ್ಯದ ಎಂಪಿ ಸಿನಿಮಾ ರಂಗದಲ್ಲಿ ಇದ್ದುಕೊಂಡು ಅವರೇ ಈ ವಿಚಾರವಾಗಿ ಸ್ಪಂದಿಸುತ್ತಿಲ್ಲ. ಕಾವೇರಿ ಹೋರಾಟಕ್ಕೆ ಕನ್ನಡ ಚಿತ್ರರಂಗ ಬೆಂಬಲಿಸುತ್ತಿಲ್ಲ ಎಂದು ಸರ್ಕಾರ ಮತ್ತು ಚಿತ್ರರಂಗದ ವಿರುದ್ಧ ಮುಖ್ಯಮಂತ್ರಿ ಚಂದ್ರು ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯದಲ್ಲಿ ನಡೆಯುತ್ತಿರುವ ರೈತ ಹಿತರಕ್ಷಣಾ ಸಮಿತಿ ಕಾವೇರಿ ಹೋರಾಟಕ್ಕೆ ಬೆಂಬಲ ಕೊಟ್ಟು ಮಾತನಾಡಿದ ಅವರು, ಚಿತ್ರರಂಗದವರು ನಾವೇ ಬೇರೆ, ಜನರೇ ಬೇರೆ ಎನ್ನಬಾರದು. ನಾವು ಬದುಕುತ್ತಿರುವುದು, ತಿನ್ನುತ್ತಿರುವುದು ಇದೇ ಜನರ ತೆರಿಗೆ ಹಣದಿಂದ. ನಾವು, ನಮ್ಮ ಕುಟುಂಬದವರು ಇಂದು ಸುಖವಾಗಿ ಇದ್ದೀವಿ ಅಂದ್ರೆ ಅದಕ್ಕೆ ಕಾರಣ ಇದೇ ಜನರು. ಅವರಿಗೆ ತೊಂದರೆಯಾದಾಗ ಅವರೊಂದಿಗೆ ನಿಲ್ಲಬೇಕಾಗಿರುವುದು ನಮ್ಮ ಕರ್ತವ್ಯ ಎಂದು ಹೇಳಿದರು.
''ಮಂಡ್ಯದ ಎಂಪಿ ಸಿನಿಮಾ ರಂಗದಲ್ಲಿ ಇದ್ದುಕೊಂಡು ಅವರೇ ಸರಿಯಾಗಿ ಸ್ಪಂದಿಸುತ್ತಿಲ್ಲ. ಅಧಿಕಾರಕ್ಕಾಗಿ ಎಲ್ಲೆಲ್ಲೋ ಓಡಾಡಿಕೊಂಡು ಇದ್ದಾರೆ. ಸಿನಿಮಾದವರು ಎಲ್ಲಾ ದಿನ ಬಂದು ಹೋರಾಟ ಮಾಡಬೇಕು ಅಂತೇನಿಲ್ಲ. ಕಾವೇರಿ ಹೋರಾಟಕ್ಕೆ ಬೆಂಬಲವನ್ನಾದರೂ ನೀಡಬೇಕು. ಈ ವಿಚಾರಕ್ಕೆ ಸ್ಪಂದಿಸದೇ ಇದ್ರೆ ಇದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ. ಚಿತ್ರರಂಗ ಧ್ವನಿ ಎತ್ತದೇ ಇರುವುದು ಬೇಜವಾಬ್ದಾರಿಯನ್ನು ತೋರಿಸುತ್ತದೆ. ನಟ, ನಟಿಯರಿಗೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಅವರಿಗೆ ಗದ್ದೆ, ಜಾನುವಾರುಗಳಿಲ್ಲ. ಹೀಗಾಗಿ ಅವರಲ್ಲಿ ಉದಾಸೀನದ ಮನೋಭಾವನೆ ಇದೆ. ಸಿನಿಮಾರಂಗ ಎಂದಿಗೂ ನೆಲ, ಜಲ, ಭಾಷೆಯ ವಿಚಾರಕ್ಕೆ ತೊಂದರೆ ಆದಾಗ ಮೊದಲು ಧ್ವನಿ ಎತ್ತಬೇಕು'' ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಮಂಡ್ಯದಲ್ಲಿ ಕಾವೇರಿಗಾಗಿ ಹೋರಾಟ: ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ರವೀಂದ್ರ ಶ್ರೀಕಂಠಯ್ಯ ಆಕ್ರೋಶ!
ಜನರ ಗುಲಾಮರಾಗುವ ಬದಲು ಅಧಿಕಾರದ ಗುಲಾಮರಾಗಿದ್ದೀರಿ.. ''ರಾಜಕಾರಣಿಗಳು ಜನರ ಗುಲಾಮರಾಗಬೇಕಿತ್ತು. ಆದರೆ ಅಧಿಕಾರದ ಗುಲಾಮರಾಗಿದ್ದೀರಿ. ರಾಜ್ಯ ಸರ್ಕಾರ ಊಸರವಳ್ಳಿ ತರ ಕಣ್ಣಮುಚ್ಚಾಲೆ ಆಡ್ತಿದೆ. ಕಾವೇರಿಗಾಗಿ ರೈತ ಹಿತರಕ್ಷಣಾ ಸಮಿತಿ ಒಳ್ಳೆಯ ನಿರ್ಧಾರ ಕೈಗೊಂಡಿದ್ದಾರೆ. ಅವರ ಹೋರಾಟಕ್ಕೆ ನಾನು ಬದ್ದನಿದ್ದೇನೆ. ನಾವೆಲ್ಲರೂ ಸಹ ಸಂರಕ್ಷಣಾ ಸಮಿತಿ ಮಾಡಿದ್ದೇವೆ. ಮೂರು ಪಕ್ಷಗಳು ಅಧಿಕಾರ, ಸ್ಥಾನ ಮತ್ತು ತಮ್ಮ ಅಸ್ತಿತ್ವಕ್ಕಾಗಿ ನಮಗೆ ಅನ್ಯಾಯ ಮಾಡುತ್ತಿದೆ. ತಮಿಳುನಾಡಿನಲ್ಲಿ ಈ ರೀತಿ ಇಲ್ಲ. ಅವರ ಹಕ್ಕನ್ನು ಅವರು ಪಡೆಯುತ್ತಾರೆ'' ಎಂದರು.
''ಈ ವಿಚಾರಗಳನ್ನು ಸುಪ್ರೀಂ ಕೋರ್ಟ್ಗೆ ಮನವರಿಕೆ ಮಾಡಬೇಕು. ಸುಪ್ರೀಂ ಕೋರ್ಟ್ ಹೇಳಿದೆ ನಾವು ತಜ್ಞರಲ್ಲ ಅಂತ. ರಾಜ್ಯ ಸರ್ಕಾರ ಅಂಕಿ ಅಂಶಗಳನ್ನು ಸಂಗ್ರಹಿಸಿ ತೀರ್ಮಾನ ತೆಗೆದುಕೊಳ್ಳಬೇಕು. ಆದರೆ ರಾಜ್ಯ ಸರ್ಕಾರವೇ ಕಣ್ಣಮುಚ್ಚಾಲೆ ಆಟ ಆಡ್ತಿದೆ. ನಮ್ಮ ನೀರು ನಮ್ಮ ಹಕ್ಕು ಅಂತ ಡಿ.ಕೆ ಶಿವಕುಮಾರ್ ಪಾದಯಾತ್ರೆ ಮಾಡಿದ್ರು. ಆದರೆ ಏನಾಯ್ತು? ನಮ್ಮ ಲೋಟದಲ್ಲಿ ನೀರಿಲ್ಲ ಬೇರೆಯವರಿಗೆ ನೀರು ಕೊಡ್ತಿದ್ದಿರಿ'' ಎಂದು ವಾಗ್ದಾಳಿ ನಡೆಸಿದರು.
''ಅಧಿಕಾರ ಹೋಗುತ್ತದೆ ಅಂತ ತಮಿಳುನಾಡಿಗೆ ನೀರು ಬಿಡುತ್ತಿದ್ದೀರಿ. ನೀವು ಧೈರ್ಯ ಮಾಡಿ ಕಾವೇರಿಗಾಗಿ ಹೋರಾಟ ಮಾಡಿ. ಸರ್ಕಾರ ವಜಾ ಮಾಡಿದ್ರೂ ನಾವು ನಿಮ್ಮ ಜೊತೆ ನಿಲ್ಲುತ್ತೇವೆ. ಆದರೆ ನಿಮಗೆಲ್ಲಾ ಅಧಿಕಾರದ ಭಯ. ಸಾಕಷ್ಟು ಅಧಿಕಾರ, ಆಸ್ತಿ ಮಾಡಿದ್ದೀರಿ. ಅಷ್ಟು ಸಾಕು. ಇವಾಗಲಾದರೂ ರೈತರ ಹಿತ ರಕ್ಷಣೆ ಮಾಡಿ'' ಎಂದು ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದರು.
ಇದನ್ನೂ ಓದಿ: Cauvery water issue: ಕಾವೇರಿ ನೀರು ಹಂಚಿಕೆ ವಿವಾದ.. ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸುವಂತೆ ಸಿಎಂ ಸಿದ್ದರಾಮಯ್ಯ ಒತ್ತಾಯ