ಮಂಡ್ಯ: ಅವನತಿಯತ್ತ ಸಾಗುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಉಳಿಸುವ ನಿಟ್ಟಿನಲ್ಲಿ ಯುವಕರ ಗುಂಪೊಂದು ನಾಟಿಕೋಳಿ ಸಾರಿನೊಂದಿಗೆ ಮುದ್ದೆ ತಿನ್ನುವ ಸ್ಪರ್ಧೆಯನ್ನು ಆಯೋಜನೆ ಮಾಡಿ ಎಲ್ಲರ ಗಮನ ಸೆಳೆದಿದೆ.
ಕೊರೊನಾ ಕಾರಣದಿಂದ ಕಳೆದೆರಡು ವರ್ಷಗಳಿಂದ ಯಾವುದೇ ಸ್ಪರ್ಧೆ ನಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೋಳಿ ಸಾರಿನೊಂದಿಗೆ ಮುದ್ದೆ ತಿನ್ನುವ ಸ್ಪರ್ಧೆಯನ್ನು ತಾಲೂಕಿನ ಕೊತ್ತತ್ತಿಯಲ್ಲಿ ಸರ್.ಎಂ. ವಿಶ್ವೇಶ್ವರಯ್ಯ ಯುವಕರ ಬಳಗ ಆಯೋಜಿಸಿತ್ತು. ಗ್ರಾಮೀಣ ಕ್ರೀಡೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಜನರು ಪಾಲ್ಗೊಂಡು ನಾಟಿ ಕೋಳಿ ಸಾರಿನೊಂದಿಗೆ ಮುದ್ದೆ ಸವಿದರು. ಜನರು ಸ್ಪರ್ಧಾಳುಗಳಿಗೆ ಚಪ್ಪಾಳೆ ಮೂಲಕ ಪ್ರೋತ್ಸಾಹಿಸಿದರು.
ಸ್ಪರ್ಧೆಯಲ್ಲಿ ಭಾಗವಹಿಸಿ 2.750kg ಮುದ್ದೆ ತಿಂದು ಮೊತ್ತಹಳ್ಳಿ ಗ್ರಾಮದ ಕೆಂಪರಾಜು ಮೊದಲ ಬಹುಮಾನ ಪಡೆದರೆ, 2.3Kg ಮುದ್ದೆ ತಿಂದು ಹುಣಸನಹಳ್ಳಿ ಗ್ರಾಮದ ಶಿವಣ್ಣ ದ್ವಿತೀಯ ಬಹುಮಾನ ಪಡೆದರು. ಅದಂತೆ 2.2 Kg, ಹಾಗೂ 2.1kg ಮುದ್ದೆ ತಿಂದು ಹುಲ್ಕೇರೆ ಪ್ರಶಾಂತ್ ಹಾಗೂ ಮಹೇಶ್ ತೃತೀಯ ಹಾಗೂ ಸಮಾಧಾನಕರ ಬಹುಮಾನಕ್ಕೆ ತೃಪ್ತಿಪಟ್ಟರು.
ಮೊದಲ ಬಾರಿ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದಿದ್ದಕ್ಕೆ ತುಂಬಾ ಸಂತೋಷವಾಗ್ತಿದೆ. ಸುಮ್ಮನೆ ನಿಂತಿದ್ದ ನನ್ನನ್ನು ಸ್ನೇಹಿತ ಈ ಸ್ಪರ್ಧೆಗೆ ಕಳುಹಿಸಿಕೊಟ್ಟರು. ಹಾಗಾಗಿ ಸ್ಪರ್ಧೆಯಲ್ಲಿ ಭಾಗವಹಿಸಿದೆ. ಗ್ರಾಮೀಣ ಕ್ರೀಡೆಯಲ್ಲಿ ಭಾಗವಹಿಸುವುದು ಅಂದ್ರೆ ತುಂಬಾ ಇಷ್ಟ, ನಾಟಿಕೋಳಿ ಸಾರಿನೊಂದಿಗೆ ಮುದ್ದೆ ತಿಂದಿದ್ದೇನೆ ಎಂದು ವಿಜೇತ ಕೆಂಪರಾಜು ಸಂತಸ ಹಂಚಿಕೊಂಡರು.
ವಿಶ್ವೇಶ್ವರಯ್ಯ ಯುವಕರ ಬಳಗದ ಅಧ್ಯಕ್ಷ ರವಿ ಮಾತನಾಡಿ, ಗ್ರಾಮೀಣ ಕ್ರೀಡೆಗಳನ್ನು ಉಳಿಸುವ ನಿಟ್ಟಿನಲ್ಲಿ ಈ ಸ್ಪರ್ಧೆ ಆಯೋಜನೆಮಾಡಿದ್ದೇವೆ. ಕೊರೊನಾದಿಂದ ಕಳೆದೆರಡು ವರ್ಷಗಳಿಂದ ಯಾವುದೇ ಕ್ರೀಡೆ ಆಯೋಜಿಸಲು ಸಾಧ್ಯವಾಗಿರಲಿಲ್ಲ. ಯುವಕರೆಲ್ಲ ಸೇರಿ ಆಯೋಜನೆ ಮಾಡಿದ್ದೇವೆ. ರಾಜ್ಯ ಮಟ್ಟದ ವರೆಗೆ ಗ್ರಾಮೀಣಾ ಕ್ರೀಡೆ ಉಳಿಯಬೇಕು. ಗೆದ್ದವರಿಗೆ ಮೊದಲ ಬಹುಮಾನ 5 ಸಾವಿರ, ಎರಡನೇ ಬಹುಮಾನ 3 ಸಾವಿರ ಹಾಗೂ ಮೂರನೇ ಬಹುಮಾನ 3 ಸಾವಿರ ನಿಗದಿ ಮಾಡಲಾಗಿತ್ತು. ಈ ತರಹದ ಕ್ರೀಡೆಗಳು ನಶಿಸಿಹೋಗಬಾರದು. ನಮ್ಮ ಗ್ರಾಮೀಣ ಕ್ರೀಡೆಗೆ ಎಲ್ಲರೂ ಪ್ರೋತ್ಸಾಹ ನೀಡುವಂತೆ ಮನವಿ ಮಾಡಿದರು.
ಇದನ್ನೂ ಓದಿ: ರಿಲ್ಯಾಕ್ಸ್ ಮೂಡಲ್ಲಿ ಸಿಎಂ.. 83 ಸಿನಿಮಾ ವೀಕ್ಷಿಸಿದ ಬೊಮ್ಮಾಯಿ