ಮಂಡ್ಯ: ಸ್ವಾಭಿಮಾನಿ ಸಂಸದೆ ಎಂದು ಪ್ರಖ್ಯಾತಿ ಪಡೆದಿರುವ ಸುಮಲತಾ ಅಂಬರೀಷ್ ಅವರು ಜಿಲ್ಲೆಯ ಪಾಲಿಗೆ ಅಪರೂಪದ ಅತಿಥಿಯಂತಾಗಿದ್ದಾರೆ. 'ಮಂಡ್ಯವನ್ನು ಸಂಸದೆ ಮರೆತರೇ' ಎನ್ನುವ ಪ್ರಶ್ನೆ ಜನರನ್ನು ಕಾಡುತ್ತಿರುವುದರ ನಡುವೆಯೇ ಬರೋಬ್ಬರಿ ಒಂದು ತಿಂಗಳ ನಂತರ ಪ್ರವಾಸ ಕೈಗೊಂಡಿದ್ದಾರೆ.
ಕೋವಿಡ್ ಎರಡನೇ ಅಲೆಯಲ್ಲಿ ಮೂರು ನಾಲ್ಕು ಬಾರಿ ಕ್ಷೇತ್ರಕ್ಕೆ ಆಗಮಿಸಿದ್ದು, ಹೊರತು ಮತ್ತೆ ಮಂಡ್ಯದತ್ತ ಮುಖ ಮಾಡಿರಲಿಲ್ಲ. ಚುನಾವಣೆ ಸಮಯದಲ್ಲಿ ನಿಮ್ಮೊಂದಿಗೆ ನಾವಿರುತ್ತೇವೆ ಎಂದು ಹೇಳಿದ ಮಾತಿನಂತೆ ನಡೆದುಕೊಳ್ಳುತ್ತಿಲ್ಲವೆಂಬುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಈ ನಡುವೆ ಜುಲೈ 2ರಂದು ಮದ್ದೂರು ಹಾಗೂ ಮಂಡ್ಯ ತಾಲೂಕಿನ ವಿವಿಧೆಡೆ ಸಂಸದೆ ಸುಮಲತಾ ಪ್ರವಾಸ ಕೈಗೊಂಡಿದ್ದಾರೆ.
ಇನ್ನು ಕೋವಿಡ್ ಸಮಯದಲ್ಲಿಯೂ ಸರಿಯಾಗಿ ಕ್ಷೇತ್ರಕ್ಕೆ ಬಂದಿಲ್ಲ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಬಳಿಕ ಜಿಲ್ಲೆ ಕಡೆ ಬಾರದ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. 'ಸುಮಕ್ಕ ಎಲ್ಲಿದ್ದೀಯಕ್ಕ' ಎನ್ನುವ ಪೋಸ್ಟ್ ಸಾಕಷ್ಟು ವೈರಲ್ ಆಗಿತ್ತು. ಇದಾದ ಬಳಿಕ ಎಚ್ಚೆತ್ತ ಅವರು ಮೇ 3ರಂದು ಜಿಲ್ಲೆಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಸರೆನ್ಸ್ ಮಾಡಿದ್ದರು.
7ರಂದು ಜಿಪಂ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕೋವಿಡ್ ನಿರ್ವಹಣೆ ಸಭೆಯಲ್ಲಿ ಪಾಲ್ಗೊಂಡಿದ್ದರು. ಮೇ 29ರಂದು ಜಿಲ್ಲೆಗೆ ಆಗಮಿಸಿ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮತ್ತೆ ಕ್ಷೇತ್ರಕ್ಕೆ ಬಂದಿಲ್ಲ.
ಆಗಾಗ ಮಂಡ್ಯಕ್ಕೆ ಆಗಮನ: ಮೇ 29ರಂದು ಮಾಧ್ಯಮ ಸಂವಾದದಲ್ಲಿ ಮಾತನಾಡಿದ್ದ ಸಂಸದೆ, ಜಿಲ್ಲೆಯ ಏಳು ಶಾಸಕರು ಅಚ್ಚುಕಟ್ಟಾಗಿ ಎಲ್ಲ ಕಡೆ ಹೋಗಿ ಕೆಲಸ ಮಾಡಿದ್ದರೆ, ಜನ ನನ್ನನ್ನು ಕೇಳೋದೆ ಇಲ್ಲ. ಶಾಸಕರ ಕೆಲಸಕ್ಕೂ ಎಂಪಿಯೇ ಬರಬೇಕು. ಜಿಪಂ, ತಾಪಂ, ಗ್ರಾಪಂ ಕೆಲಸಕ್ಕೂ ಎಂಪಿ ಬರಬೇಕು ಎಂದರೆ ಅಲ್ಲಿ ಯಾರು ಕೆಲಸ ಮಾಡುವವರೇ ಇಲ್ವಾ. ಸುಮಲತಾ ಬಿಟ್ಟರೆ ಯಾರು ಕೆಲಸ ಮಾಡುವವವರಿಲ್ಲ.
ಅದಕ್ಕೆ ನನ್ನನ್ನು ಕರೆಯುತ್ತಿರಬಹುದೆನೋ?. ನಮ್ಮಂತಹವರು ಒಂದೆ ಕಡೆ ಹೋದಾಗ ಆಸೆ, ಪ್ರೀತಿಯಿಂದ ತುಂಬಾ ಜನ ಬರುತ್ತಾರೆ. ನಾನು ಇದ್ದ ಕಡೆಯಿಂದ ಫೋನ್ ಸಂಪರ್ಕದಲ್ಲಿಯೇ ಏನೇನು ಸಮಸ್ಯೆಗೆ ಪರಿಹಾರ ಕೊಡಿಸಬಹುದೆಂದು ನೋಡುತ್ತೇನೆ ಎಂದು ಕ್ಷೇತ್ರಕ್ಕೆ ಬಾರದಿರುವುದಕ್ಕೆ ಸಮರ್ಥನೆ ನೀಡಿದ್ದರು.
ಸಾರ್ವಜನಿಕರ ಅಹವಾಲು ಸಲ್ಲಿಕೆ: ಕ್ಷೇತ್ರಕ್ಕೆ ಬಾರದೇ ಸಾಮಾಜಿಕ ಜಾಲತಾಣದಲ್ಲಷ್ಟೇ ಸಕ್ರಿಯವಾಗಿರುವ ಸಂಸದೆ ಅವರಿಗೆ ಜಿಲ್ಲೆಯ ಜನರು ಅಲ್ಲಿಯೇ ತಮ್ಮ ಅಹವಾಲು ಸಲ್ಲಿಸುತ್ತಿದ್ದಾರೆ. ಮನ್‌ಮುಲ್ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ, ನಮ್ಮ ಗ್ರಾಮಕ್ಕೆ ಸಮುದಾಯ ಭವನ ಕಟ್ಟಿಸಲು ಅನುದಾನ ಕೊಡಿ, ಚರಂಡಿ ನಿರ್ಮಿಸುವ ಬಗ್ಗೆ, ಮಳವಳ್ಳಿ ಕ್ಷೇತ್ರದಲ್ಲಿ ಆರೋಗ್ಯ ಇಲಾಖೆ ಅವ್ಯವಸ್ಥೆ ಬಗ್ಗೆ ಕಾಮೆಂಟ್ ಮೂಲಕ ಅಹವಾಲು ಸಲ್ಲಿಸುತ್ತಿದ್ದಾರೆ. ಕೆಲವರು ಫೇಸ್‌ಬುಕ್ ಬಿಟ್ಟು ಮಂಡ್ಯಕ್ಕೆ ಬನ್ನಿ ಎಂದು ಮನವಿ ಮಾಡುತ್ತಿದ್ದಾರೆ.
ಮನ್‌ಮುಲ್ ಸದ್ದಿಲ್ಲ: ಮಂಡ್ಯ ಜಿಲ್ಲಾ ಹಾಲು ಒಕ್ಕೂಟ(ಮನ್ ಮುಲ್)ದಲ್ಲಿ ನಡೆದಿರುವ ಕೋಟ್ಯಂತರ ರೂ. ಹಗರಣದ ಬಗ್ಗೆ ಜಿಲ್ಲೆಯಲ್ಲಿ ಗಂಭೀರ ಚರ್ಚೆ ನಡೆಯುತ್ತಿವೆ. ನಿರಂತರವಾಗಿ ಪ್ರತಿಭಟನೆ, ಸುದ್ದಿಗೋಷ್ಠಿಗಳನ್ನು ಮಾಡಲಾಗುತ್ತಿದೆ. ಪಕ್ಷಾತೀತವಾಗಿ ನಾಯಕರು, ಮುಖಂಡರು ಹಾಗೂ ಸಂಘಟನೆಗಳ ಮುಖ್ಯಸ್ಥರು ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸುತ್ತಿದ್ದಾರೆ.
ಮತ್ತೊಂದೆಡೆ ತನಿಖೆ ವಿಳಂಬವಾಗುತ್ತಿರುವುದರಿಂದ ಜನಪ್ರತಿನಿಧಿಗಳು ಸ್ವ ಪ್ರತಿಷ್ಠೆ ಬಿಟ್ಟು ಸರ್ಕಾರದ ಮೇಲೆ ಒತ್ತಡ ಹಾಕಬೇಕೆಂಬ ಆಗ್ರಹವೂ ಕೇಳಿ ಬರುತ್ತಿದೆ. ಆದರೆ, ಹಗರಣದ ತನಿಖೆಗೆ ಸಂಬಂಧಿಸಿದಂತೆ ಈವರೆಗೆ ಸಂಸದ ಸುಮಲತಾ ಅಂಬರೀಷ್ ತುಟಿ ಬಿಚ್ಚಿಲ್ಲ.
ಈ ಹಿಂದೆ ಅಕ್ರಮ ಗಣಿಗಾರಿಕೆ ಸೇರಿದಂತೆ ಕೆಲ ವಿಚಾರದ ಬಗ್ಗೆ ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡುತ್ತಿದ್ದ ಸಂಸದೆ, ಇದೀಗ ಹಾಲು ಉತ್ಪಾದಕರ ಪರ ದನಿ ಎತ್ತಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಮತ್ತೊಂದೆಡೆ ಸರ್ಕಾರ ಮೈಶುಗರ್ ಕಾರ್ಖಾನೆಯನ್ನು ಗುತ್ತಿಗೆ ನೀಡುವುದಾಗಿ ಘೋಷಿಸಿದೆ. ಈ ಬಗ್ಗೆಯೂ ಅವರ ಸ್ಪಷ್ಟ ನಿಲುವಿನ ಬಗ್ಗೆಯೂ ಜನರು ನಿರೀಕ್ಷೆಯಲ್ಲಿದ್ದಾರೆ.