ಮಂಡ್ಯ: ಜೆಡಿಎಸ್ ಶಾಸಕರ ಮಾತಿಗೆ ಬೇಸರಗೊಂಡ ಸಂಸದೆ ಸುಮಲತಾ ಅಂಬರೀಶ್ ಕೆಡಿಪಿ ಸಭೆಯನ್ನು ಅರ್ಧಕ್ಕೆ ಬಹಿಷ್ಕರಿಸಿ ಹೊರ ನಡೆದರು.
ಮಂಡ್ಯ ಜಿಪಂ ಕಾವೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ, ಸಂಸದೆ ಸುಮಲತಾ ಅಂಬರೀಶ್, ಸಚಿವ ಹಾಗೂ ಅಧಿಕಾರಿಗಳು ಇದ್ದರು.
ಸಭೆ ಆರಂಭವಾಗುತ್ತಿದ್ದಂತೆ ಆಕ್ಸಿಜನ್ ಕೊರತೆ ಬಗ್ಗೆ ಪ್ರಸ್ತಾಪಿಸಿದ ಜೆಡಿಎಸ್ ಶಾಸಕರು ತಮ್ಮ ಕ್ಷೇತ್ರದಲ್ಲಿ ಸಮಸ್ಯೆಗಳು ಹಾಗೂ ಸೌಲಭ್ಯ ನೀಡದಿರುವ ಬಗ್ಗೆ ಅಧಿಕಾರಿಗಳು ಹಾಗೂ ಉಸ್ತುವಾರಿ ಸಚಿವ ನಾರಾಯಣಗೌಡರಿಗೆ ಪ್ರಶ್ನಿಸಿದರು. ಮಿಮ್ಸ್ ಆಸ್ಪತ್ರೆಯಲ್ಲಿ ಹೆಚ್ಚುವರಿ 150 ಬೆಡ್ ರೆಡಿಯಾಗಿದ್ದರೂ ರೋಗಿಗಳನ್ನು ದಾಖಲು ಮಾಡಿಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಸಂಸದೆ ಸುಮಲತಾ, ಒಬ್ಬರ ಮೇಲೊಬ್ಬರು ವಾಗ್ದಾಳಿ ಮಾಡುವುದಕ್ಕಿಂತ ಸದ್ಯ ಎದುರಾಗಿರುವ ಸಂಕಷ್ಟವನ್ನು ಪರಿಹರಿಸುವ ಬಗ್ಗೆ ಚರ್ಚಿಸುವುದು ಉತ್ತಮ ಎಂದರು. ಸಂಸದರ ಮಾತಿನಿಂದ ಅಸಮಾಧಾನಗೊಂಡ ರವೀಂದ್ರ ಶ್ರೀಕಂಠಯ್ಯ, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿದ್ದ ಆಕ್ಸಿಜನ್ ಮಹಾರಾಷ್ಟಕ್ಕೆ ಕೊಟ್ಟಾಗ ನೀವು ಯಾಕೆ ಪ್ರಶ್ನೆ ಮಾಡಲಿಲ್ಲ. ಕೇಂದ್ರ ಸರ್ಕಾರದ ತಾರತಮ್ಯದಿಂದಾಗಿ ರಾಜ್ಯ ಸರ್ಕಾರ ಶವ ಸುಡುವುದಕ್ಕೆ ಸೌದೆ ಹುಡುಕುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶ್ರೀಕಂಠಯ್ಯರ ನಡೆಗೆ ಬೇಸರಗೊಂಡ ಸುಮಲತಾ, ಸಭೆಯನ್ನು ಅರ್ಧಕ್ಕೆ ಬಹಿಷ್ಕರಿಸಿ ಹೊರನಡೆದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಇಂತಹ ಸಮಯದಲ್ಲಿ ರಾಜಕಾರಣ ಮಾಡುತ್ತಿರುವುದಕ್ಕೆ ನನ್ನ ರಕ್ತ ಕುದಿಯುತ್ತಿದೆ. ಸಚಿವರನ್ನು ಮಾತನಾಡಲು ಬಿಡದೆ, ಅಧಿಕಾರಿಗಳ ಮೇಲೆ ದಬ್ಬಾಳಿಗೆ ಮಾಡುತ್ತಿದ್ದಾರೆ. ಕೇಂದ್ರದ ಮೇಲೆ ಮಾತನಾಡುವುದಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಇಲ್ಲವೇ ಎಂದು ಪ್ರಶ್ನಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ರವೀಂದ್ರ ಶ್ರೀಕಂಠಯ್ಯ, ಜನ ಸಾಯುತ್ತಿದ್ದರೂ ಸಭೆಯಿಂದ ಪಲಾಯನಗೈದಿರುವುದು ಮಂಡ್ಯ ಜನರಿಗೆ ಮಾಡಿರೊ ಅವಮಾನವಾಗಿದೆ. ಸಂಸದರ ವರ್ತನೆಯಿಂದ ನಮ್ಮ ರಕ್ತ ಕುದಿಯುತ್ತಿದೆ ಎಂದು ಕಿಡಿಕಾರಿದರು.