ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಕಳೆದೊಂದು ವಾರದಿಂದ ಗಣಿಗಾರಿಕೆ ಧೂಳಿನ ಸದ್ದು ಜೋರಾಗಿದೆ. ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿರುವ ಸಂಸದೆ ಸುಮಲತಾ ಅಂಬರೀಶ್, ಇಂದು ಬೇಬಿ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ. ಇನ್ನೊಂದೆಡೆ ಸುಮಲತಾ ಭೇಟಿ ಸ್ವಾಗತಿಸಿರುವ ಶಾಸಕ ಪುಟ್ಟರಾಜು ತನಗೂ ಆಹ್ವಾನ ನೀಡಿದ್ರೆ ಬರುವುದಾಗಿ ತಿಳಿಸಿದ್ದಾರೆ.
ಕೆಆರ್ಎಸ್ ಡ್ಯಾಂ ಬಿರುಕುಗೊಂಡಿರುವ ಹೇಳಿಕೆ ವಿಚಾರವಾಗಿ ಶುರುವಾಗಿರುವ ಸಂಸದೆ ಸುಮಲತಾ ಹಾಗೂ ದಳಪತಿಗಳ ವಾಕ್ಸಮರ ಸ್ವಲ್ಪ ತಣ್ಣಗಾಗಿದೆಯಾದರೂ ಕಲ್ಲು ಗಣಿಗಾರಿಕೆ ವಿಚಾರ ಮಾತ್ರ ಸುದ್ದು ಮಾಡುತ್ತಿದೆ. ಜುಲೈ 7 ರಂದು ಸುಮಲತಾ ಅಂಬರೀಶ್ ಕೈಗೊಂಡಿದ್ದ ಅಕ್ರಮ ಗಣಿ ಪ್ರದೇಶ ಪರಿಶೀಲನೆ ಅರ್ಧಕ್ಕೆ ಮೊಟಕುಗೊಂಡಿತ್ತು. ಮತ್ತೆ ಗಣಿ ಪ್ರದೇಶಕ್ಕೆ ಭೇಟಿ ನೀಡುವ ಡೇಟ್ ಫಿಕ್ಸ್ ಮಾಡಿಕೊಂಡಿರುವ ಸಂಸದೆ, ಇಂದು ಬೇಬಿ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ.
ಕೆಆರ್ಎಸ್ ಡ್ಯಾಂನಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾಹಿತಿ ಪಡೆದುಕೊಳ್ಳಲು ಮುಂದಾಗಿರುವ ಸಂಸದೆ, ತದನಂತರ ಬೇಬಿ ಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಬೇಬಿ ಬೆಟ್ಟಕ್ಕೆ ಸುಮಲತಾ ಅಂಬರೀಶ್ ಭೇಟಿ ನೀಡುತ್ತಿರುವುದನ್ನು ಸ್ವಾಗತಿಸಿರುವ ಜೆಡಿಎಸ್ ಶಾಸಕ ಸಿ.ಎಸ್.ಪುಟ್ಟರಾಜು, ಮುತ್ತಾತನ ಕಾಲದಿಂದಲೂ ಬೇಬಿ ಬೆಟ್ಟದಲ್ಲಿ ಕೈ ಕುಳಿ ಮೂಲಕ ಕಲ್ಲು ಗಣಿಗಾರಿಕೆ ಮಾಡಿಕೊಂಡು ಬರಲಾಗುತ್ತಿತ್ತು. ನಾನು ಸಚಿವನಾಗಿದ್ದಾಗಲೇ ಕನ್ನಂಬಾಡಿ ಕಟ್ಟೆಗೆ ಅಪಾಯ ವಿಚಾರ ಚರ್ಚೆಗೆ ಬಂತು. ಆ ವೇಳೆ ಜಿಲ್ಲಾಡಳಿತದ ಮೂಲಕ ನಿಷೇಧಾಜ್ಞೆ ಜಾರಿಗೊಳಿಸಿ, ನಮ್ಮ ಕುಟುಂಬದ ಗಣಿಗಾರಿಕೆಯನ್ನು ಬೇಬಿ ಬೆಟ್ಟದಿಂದ ಸ್ಥಳಾಂತರಿಸಲಾಯಿತು. ಸಧ್ಯ ನಮ್ಮ ಕುಟುಂಬ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ಮಾಡುತ್ತಿಲ್ಲ. ಆದ್ರೆ ಸಾವಿರಾರು ಮಂದಿ ಗಣಿಗಾರಿಕೆಯನ್ನೇ ನಂಬಿಕೊಂಡಿದ್ದು, ಟ್ರಯಲ್ ಬ್ಲಾಸ್ಟ್ ನಡೆಸುವ ಮೂಲಕ ಸರ್ಕಾರ ನಿಜಕ್ಕೂ ಡ್ಯಾಂಗೆ ಅಪಾಯವಿದೆಯೆ? ಎಂಬುದನ್ನು ಸ್ಪಷ್ಟ ಪಡಿಸಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿರಿ: ಮೇ, ಜೂನ್ ತಿಂಗಳ ಬಿಸಿಯೂಟದ ಹಣ ನೇರ ವಿದ್ಯಾರ್ಥಿಗಳ ಖಾತೆಗೆ: ಶಿಕ್ಷಣ ಇಲಾಖೆ
ಇನ್ನು ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿರುವ ಸುಮಲತಾ ಅಂಬರೀಶ್ ಅವರನ್ನು ತಮ್ಮ ಕ್ಷೇತ್ರಕ್ಕೂ ಬರುವಂತೆ ಆಹ್ವಾನ ನೀಡಿರುವ ನಾಗಮಂಗಲ ಕ್ಷೇತ್ರದ ಶಾಸಕ ಸುರೇಶ್ ಗೌಡ, ತಮ್ಮ ಕ್ಷೇತ್ರದಲ್ಲಿ ಒಂದೆರಡು ಗಣಿ ಹೊರತುಪಡಿಸಿ ಉಳಿದಿದ್ದೆಲ್ಲವೂ ಅಕ್ರಮವಾಗಿ ನಡೆಸಲಾಗುತ್ತಿದೆ. ನಾನು ಸಾಕಷ್ಟು ಬಾರಿ ಪ್ರಯತ್ನ ಮಾಡಿದ್ರೂ ಅಕ್ರಮ ಗಣಿಗಾರಿಕೆ ತಡೆಯಲು ಸಾಧ್ಯವಾಗಿಲ್ಲ. ನೀವು ಬಂದು ಅಕ್ರಮ ಗಣಿಗಾರಿಕೆ ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ.
ಇನ್ನೊಂದೆಡೆ ಗಣಿ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ನಿಜಾಂಶವನ್ನ ಜನರಿಗೆ ತಿಳಿಸುವ ಕೆಲಸ ಮಾಡುವುದಾಗಿ ಸಂಸದೆ ಸುಮಲತಾ ತಿಳಿಸಿದ್ದಾರೆ. ಅಲ್ಲದೇ ಅಕ್ರಮ ಗಣಿಗಾರಿಕೆ ಬಗ್ಗೆ ಅಧಿಕಾರಿಗಳು ಯಾವ ಕ್ರಮ ಕೈಗೊಂಡಿದ್ದಾರೆ ಎಂಬುದನ್ನ ತಿಳಿಯುತ್ತೇನೆ. ನಂತರ ಗಣಿ ಸಚಿವರನ್ನ ಭೇಟಿ ಮಾಡುವುದಾಗಿ ತಿಳಿಸಿದ್ದಾರೆ.