ಮಂಡ್ಯ: ಸುಮಲತಾ ಮತ್ತು ಜೆಡಿಎಸ್ ನಾಯಕರ ವಾಗ್ದಾಳಿ ಮತ್ತಷ್ಟು ತಾರಕಕ್ಕೇರಿದ್ದು, ಮಿತಿಮೀರಿದ ಪದ ಪ್ರಯೋಗಕ್ಕೆ ಮಂಡ್ಯ ಸಾಕ್ಷಿಯಾಗುತ್ತಿದೆ.
ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸುರೇಶ್ ಗೌಡ, ನಮ್ಮಿಬ್ಬರ ಮಧ್ಯೆ ತಂದು ಹಾಕಿ ತಮಾಷೆ ನೋಡೋರು ತುಂಬಾ ಜನ ಇದ್ದಾರೆ. ಅಂತಹ ಮನೆಹಾಳರನ್ನು ಹುಡುಕಬೇಕು. ಪ್ಲಾಂಟ್ ಯಾರು ಮಾಡ್ತಾರೆ, ನೀರು, ಗೊಬ್ಬರ ಯಾರು ಹಾಕುತ್ತಾರೆ ಅನ್ನೋದನ್ನು ಹುಡುಕಬೇಕು ಎಂದರು.
ಮಂಡ್ಯದಲ್ಲೆ ನಮ್ಮ ಮಧ್ಯೆ ತಂದು ಹಾಕುವಂತಹ ಮನೆಹಾಳರಿದ್ದಾರೆ. ಅವರು ಬಿಜೆಪಿ, ಕಾಂಗ್ರೆಸ್ ಹಾಗೂ ಇನ್ನೊಂದು ಪಕ್ಷದಲ್ಲೂ ಇರ್ತಾರೆ ಎಂದರಲ್ಲದೇ, ಸುಮಲತಾ ಬೆನ್ನಹಿಂದೆ ಬೇರೆಯವರು ಇದ್ದಾರೆ. ಆ ಮನೆಹಾಳರದ್ದೇನೋ ಡ್ಯಾಮೇಜ್ ಆಗಿತ್ತು. ಅದನ್ನು ಕಂಟ್ರೋಲ್ ಮಾಡೋಕೆ ಇದನ್ನು ಪ್ಲಾಂಟ್ ಮಾಡಿದ್ದಾರೆ ಎಂದು ಸುಮಲತಾ ಬೆಂಬಲಿಗರ ಮೇಲೆ ಗಂಭೀರವಾಗಿ ಆರೋಪ ಮಾಡಿದರು.
'ಸುಮಲತಾಗೆ ಕೀ ಕೊಟ್ಟು ಬಿಡುತ್ತಿದ್ದಾರೆ'
ಸುಮಲತಾ ಅವರು ಹೇಳಿಕೆ ಮಾತು ಕೇಳುತ್ತಿದ್ದಾರೆ. ಹೇಳಿಕೆ ಮಾತು ಕೇಳಿಕೊಂಡು ಏನೋ ಬಿಟ್ಟರು ಅಂದಹಾಗೆ ಆಗ್ತಿದೆ. ಸುಮಲತಾ ಅವರನ್ನು ಕೀ ಕೊಟ್ಟು ಬಿಡುತ್ತಿದ್ದಾರೆ. ಎಂಪಿ ಚುನಾವಣೆಯಿಂದ ಕೀ ಕೊಟ್ಟವರು ಇದರಲ್ಲಿ ಪಾತ್ರದಾರರು. ಆದ್ರೆ ಇದರಲ್ಲಿ ಬೇರೆಯವರು ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಯಾರು ಕಾರಣ? ಈ ಬಗ್ಗೆ ಯಾರು, ಏನಂದ್ರು? ಈ ವಿಡಿಯೋ ನೋಡಿ..
ದೊಡ್ಡಣ್ಣ ಮಾತಿಗೆ ಪ್ರತಿಕ್ರಿಯೆ :
ದೊಡ್ಡಣ್ಣ ಮಾತನಾಡಿದ್ದಾರೋ?, ಮಾತನಾಡಿಸಿದ್ದಾರೋ ಯಾರಿಗೆ ಗೊತ್ತು. ಅವರು ಮೇರು ಕಲಾವಿದರು, ಬಹಳ ಸೀನಿಯರ್ ಇದ್ದಾರೆ. ಅವರು, ಇಷ್ಟು ದಿನ ಯಾಕೆ ಹೇಳಲಿಲ್ಲ.? ಅವತ್ತೇ ಕುಮಾರಣ್ಣ ಹೀಗೆ ಹೇಳಿದ್ದರೆ, ಪ್ರತಿಭಟನೆ ಮಾಡ್ತೀನಿ ಅಂತ ಹೇಳಬೇಕಿತ್ತು ಆಗ ಸುಮ್ಮನೆ ಇದ್ದರು. ಅವರೇ ಹೀಗೆ ಹೇಳಿದ್ದಾರೋ? ಅಥವಾ ಬೇರೆಯವರೂ ಹೇಳಿಸಿದ್ದಾರೋ ಗೊತ್ತಿಲ್ಲ. ಮುಂದೆ ಹೀಗೊಂದು ಡೈಲಾಗ್ ಹೊಡಿ ಅಂದಿದ್ರು ಹೊಡೆದುಬಿಟ್ಟೆ ಅಂತ ದೊಡ್ಡಣ್ಣ ಹೇಳಬಹುದು ಎಂದರು.