ಮಂಡ್ಯ: ಗೊಂದಲ ಇದ್ದರೆ ಒಂಥರಾ ಟೇಸ್ಟ್. ಗೊಂದಲ ಎಲ್ಲಾ ಪಕ್ಷದಲ್ಲೂ ಇರುತ್ತೆ. ಅದನ್ನೆಲ್ಲಾ ಮೆಟ್ಟಿ ನಿಂತು ಮುಂದೆ ಹೋಗುವ ಶಕ್ತಿಯನ್ನು ಭಗವಂತ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಕೊಟ್ಟಿದ್ದಾನೆ ಎಂದು ಜೆಡಿಎಸ್ ಶಾಸಕ ಸುರೇಶ್ ಗೌಡ ವರ್ಣನೆ ಮಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು,ಸರ್ಕಾರ ಐದು ವರ್ಷ ನಡೆಯುವುದು ನೂರಕ್ಕೆ ನೂರು ಸತ್ಯ.ಚುನಾವಣೆ ಫಲಿತಾಂಶದ ನಂತರ ಸರ್ಕಾರ ಉರುಳುತ್ತೆ ಎಂಬುದು ಊಹಾಪೋಹ ಎಂದರು.
ಆಪರೇಷನ್ ಕಮಲ ನಿರಂತರವಾಗಿ ನಡೆಯುತ್ತಿರುತ್ತೆ.ಆದರೆ ನನ್ನನ್ನು ಬಿಜೆಪಿಯವರು ನಂಬಲ್ಲ.ನಾನು ಪಕ್ಷಕ್ಕೆ ನಿಷ್ಟ ಎಂಬುದು ಅವರಿಗೆ ಗೊತ್ತಿದೆ, ಹಾಗಾಗಿ ನನ್ನನ್ನು ಸಂಪರ್ಕಿಸಿಲ್ಲ ಎಂದರು.
ಹೊಂದಾಣಿಕೆ ಇಲ್ಲದಿದ್ದರೆ ಸರ್ಕಾರ ವಿಸರ್ಜನೆ ಮಾಡಿ ಎಂಬ ಹೊರಟ್ಟಿ ಹೇಳಿಕೆ ವಿಚಾರವಾಗಿ, ಬಸವರಾಜ ಹೊರಟ್ಟಿ ನಮ್ಮ ಪಕ್ಷದ ಹಿರಿಯ ನಾಯಕರು. ಅವರು ಅನುಭವದ ಮಾತು ಹೇಳಿದ್ದಾರೆ. ಅದು ಅವರ ವೈಯಕ್ತಿಕ ವಿಚಾರ. ಈ ಬಗ್ಗೆ ಪಕ್ಷದ ಹೈ ಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.
ಚಲುವರಾಯಸ್ವಾಮಿ ವಿರುದ್ಧ ಆಕ್ರೋಶ
ಸುಮಲತಾ ಬೆಂಬಲಿಗ ಇಂಡುವಾಳು ಸಚ್ಚಿದಾನಂದ ಹೇಳಿರೋದು ಸತ್ಯ. ನಾವು ಕೂಡ, ಸುಮಲತಾ ಪರ ಚುನಾವಣೆ ಮಾಡಿದ್ದಾರೆ ಅಂತಾನೇ ಹೇಳುತ್ತಿರೋದು.ಕೋತಿ ಮೊಸರು ತಿಂದು ಬೇರೆಯವರ ಬಾಯಿಗೆ ಒರೆಸಿತು ಎಂಬಂತ ಬುದ್ಧಿ ಇವರದು. ಸುಮಲತಾ ಪರ ಪ್ರಚಾರ ಮಾಡಿದ್ದನ್ನು ಒಪ್ಪಿಕೊಳ್ಳದೇ ತಟಸ್ಥವಾಗಿ ಇದ್ದೆವು ಅಂತಾರೆ ಎಂದು ಚಲುವರಾಯಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್‌ನವರೇ ಸುಮಲತಾಗೆ ತೆರೆಮರೆಯಲ್ಲಿ ಸಪೋರ್ಟ್ ಮಾಡಿದ್ದಾರೆ ಎಂಬ ಸುಮಲತಾ ಬೆಂಬಲಿಗರ ಹೇಳಿಕೆ ವಿಚಾರವಾಗಿ, ಅವರು ಯಾರು ಎಂದು ಬಹಿರಂಗಪಡಿಸಲಿ. ಮಂಡ್ಯ ಬಗ್ಗೆ ಮಾತನಾಡಿದರೆ ಯಾವಾಗಲೂ ಸುದ್ದಿಯಲ್ಲಿರಬಹುದು ಎಂದು ಹೀಗೆಲ್ಲಾ ಮಾತನಾಡುತ್ತಿದ್ದಾರೆ. ಸುಮ್ಮನೆ ಹೇಳುವ ಬದಲು ಜೆಡಿಎಸ್‌ನವರು ಯಾರು ಸುಮಲತಾ ಪರ ಕೆಲಸ ಮಾಡಿದ್ರು ಎಂದು ನಮಗೂ ತಿಳಿಸಲಿ ಎಂದು ಸವಾಲು ಹಾಕಿದರು.
ನಿಖಿಲ್ ಕುಮಾರಸ್ವಾಮಿ ಸುಮಾರು ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತ. ನಿಖಿಲ್ ಪಾರ್ಲಿಮೆಂಟ್‌ಗೆ ಪ್ರವೇಶ ಮಾಡುವುದು ಸೂರ್ಯ-ಚಂದ್ರ ಇರುವಷ್ಟೇ ಸತ್ಯ. ಯಾವ ಅನುಕಂಪವೂ ಇಲ್ಲ. ಕೆಲವರು ಸಿಂಪತಿಯನ್ನು ಬಂಡವಾಳ ಮಾಡಿಕೊಳ್ಳಲು ಹೋದರು ಅಷ್ಟೇ, ಎಂದು ಪರೋಕ್ಷವಾಗಿ ಚಲುವರಾಯಸ್ವಾಮಿ ವಿರುದ್ಧ ಹರಿಯಾಯ್ದರು.