ಮಂಡ್ಯ : ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ದನಿ ಎತ್ತಿರುವ ಸಂಸದೆ ಸುಮಲತಾ ಅಂಬರೀಷ್ ತಮ್ಮ ಹೋರಾಟವನ್ನು ದೆಹಲಿ ಮಟ್ಟದಲ್ಲಿ ಮುಂದುವರೆಸಿದ್ದಾರೆ. ನಿನ್ನೆ ಕೂಡ ಸಂಸತ್ತಿನಲ್ಲಿ ಗಣಿಗಾರಿಕೆ ವಿಚಾರ ಪ್ರಸ್ತಾಪಿಸಿ, ಗಣಿ ಧೂಳಿನಿಂದಾಗಿ ಉಂಟಾಗುತ್ತಿರುವ ದುಷ್ಟರಿಣಾಮದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಇನ್ನೊಂದೆಡೆ ಸುಮಲತಾ ವಿಚಾರದಲ್ಲಿ ಸೈಲೆಂಟಾಗಿದ್ದ ಶ್ರೀರಂಗಪಟ್ಟಣದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಮತ್ತೆ ಗುಡುಗಿದ್ದಾರೆ.
ಸಕ್ಕರೆ ನಾಡು ಮಂಡ್ಯದಲ್ಲಿ ಆರಂಭವಾಗಿರುವ ಅಕ್ರಮ ಕಲ್ಲು ಗಣಿಗಾರಿಕೆ ರಾಜಕೀಯ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಸಂಸದೆ ಸುಮಲತಾ ಅಂಬರೀಶ್ ಗಣಿಗಾರಿಕೆ ವಿರುದ್ಧ ಆರಂಭಿಸಿರುವ ಹೋರಾಟ ದೆಹಲಿ ಅಂಗಳ ತಲುಪಿದೆ. ಸಂಸತ್ ಅಧಿವೇಶನದಲ್ಲಿ ಮಂಡ್ಯದ ಅಕ್ರಮ ಗಣಿಗಾರಿಕೆ ವಿಚಾರ ಪ್ರಸ್ತಾಪಿಸಿದ್ದಾರೆ.
ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿಚಾರ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸಿದ ಸುಮಲಾತಾ, ಅಕ್ರಮ ಕಲ್ಲು ಗಣಿಯಲ್ಲಿ ಭಾರಿ ಪ್ರಮಾಣದ ಸ್ಫೋಟಕ ಹಾಗೂ ರಾಸಾಯನಿಕ ಬಳಸಲಾಗುತ್ತಿದೆ. ಇದರಿಂದ ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ಶ್ವಾಸಕೋಶ ಸೇರಿದಂತೆ ಹಲವು ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.
ಜಾನುವಾರುಗಳ ಮೇವಿನ ಮೇಲೆ ರಾಸಾಯನಿಕಯುಕ್ತ ಧೂಳು ಕೂರುತ್ತಿದೆ. ಅಂತರ್ಜಲ ಹಾಗೂ ಪರಿಸರದ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ವಿವರಿಸಿದರು. ಇದಕ್ಕೆ ಉತ್ತರಿಸಿದ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್, ಎಲ್ಲಾ ರಾಜ್ಯಗಳಲ್ಲೂ ಪರಿಸರ ಮಾನಿಟರಿಂಗ್ ಕೇಂದ್ರ ತೆರೆಯಲಾಗಿದೆ. ಅವರ ಕ್ಷೇತ್ರದಲ್ಲಿ ತೆರೆದಿರುವ ಮಾನಿಟರಿಂಗ್ ಕೇಂದ್ರದಿಂದ ಮಾಹಿತಿ ಪಡೆದುಕೊಳ್ಳಬಹುದು ಎಂದರು.
ಈ ಬಗ್ಗೆ ಶ್ರೀರಂಗಪಟ್ಟಣ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ನೂರಾರು ವರ್ಷಗಳಿಂದ ಗಣಿಗಾರಿಕೆ ನಡೆಯುತ್ತಿದೆ. ಸಂಸದರು ಎಲ್ಲರಿಗೂ ತೊಂದರೆ ಕೊಟ್ಟು, ಜಿಲ್ಲಾ ವ್ಯವಸ್ಥೆಯನ್ನೇ ಅಲ್ಲೋಲಕಲ್ಲೋಲ ಮಾಡಿದ್ದಾರೆ. ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಎಂಪಿ ಅವರಿಗೆ ಮಂಡ್ಯದ ಸಂಸ್ಕೃತಿ ಗೊತ್ತಿಲ್ಲ. ಅವರ ಯೋಜನೆ ತುಘಲಕ್ ಸಂಸ್ಕೃತಿ ರೀತಿ ಇದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ಬಗ್ಗೆ ಲೋಕಸಭೆಯಲ್ಲಿ ಧ್ವನಿಯೆತ್ತಿದ ಸಂಸದೆ ಸುಮಲತಾ ಅಂಬರೀಷ್