ಮಂಡ್ಯ: ಸುಮಲತಾ ವಿರುದ್ಧ ರಾಜ್ಯ ಸರ್ಕಾರ ಕ್ರಮ ವಹಿಸಬೇಕು ಎಂದು ಮಂಡ್ಯದಲ್ಲಿ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಆರ್‌ಎಸ್ ಡ್ಯಾಂ ಬಿರುಕು ಬಿಟ್ಟಿಲ್ಲವೆಂದು ರಾಜ್ಯ ಸರ್ಕಾರ ಟೆಕ್ನಿಕಲ್ ರಿಪೋರ್ಟ್ ಬಿಡುಗಡೆ ಮಾಡಿದೆ. ಆದ್ರೆ ಇವರೇಕೆ ಇದನ್ನು ಸೃಷ್ಟಿಸಿ ಜನರಲ್ಲಿ ಆತಂಕ ಮೂಡಿಸುತ್ತಿದ್ದಾರೆ ಅನ್ನೋದು ಬಹಳ ಆಶ್ಚರ್ಯದ ಸಂಗತಿ ಎಂದರು.
ಒಬ್ಬ ಸಂಸದೆ ಈ ರೀತಿ ಉದ್ದೇಶ ಇಟ್ಟಕೊಂಡ್ರೆ, ರಾಜ್ಯ ಸರ್ಕಾರ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಡ್ಯಾಂ ವರದಿ ಬಂದ ಮೇಲೂ ಬಿರುಕು ಬಿಟ್ಟಿದೆ ಅಂತಾ ಹೇಳ್ತಿದ್ದಾರೆ. ಹಾಗಾದ್ರೆ ಸರ್ಕಾರ ಏನು ಮಾಡ್ತಿದೆ? ಇವರ ಮೇಲೆ ಯಾಕೆ ಕ್ರಮ ತೆಗೆದುಕೊಂಡಿಲ್ಲ? ಎಂದರು.
ಸಾಮಾನ್ಯ ವ್ಯಕ್ತಿ ಕಟ್ಟೆ ಒಡೆದಿದೆ ಅಂತ ಹೇಳಿದ್ರೆ, ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತಿದ್ರಿ. ಒಬ್ಬ ಸಂಸದೆ ಈ ರೀತಿಯ ಹೇಳಿಕೆ ಕೊಟ್ಟಿದ್ದಾರೆ ಅಂದ್ರೆ ಅವರ ಮೇಲೆ ಕ್ರಮವಹಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದರು. ದೇಶದ ಗೌಪ್ಯತೆ ಕಾಪಾಡ್ತೀನಿ ಅಂತ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕೆಆರ್‌ಎಸ್ ಡ್ಯಾಂ ದೇಶದ ಆಸ್ತಿ, ಇದರ ಬಗ್ಗೆ ಬಿರುಕು ಬಿಟ್ಟಿದೆ ಅಂತಾ ಬಹಿರಂಗವಾಗಿ ಹೇಳೋದೇನಿದೆ? ನಾಗರಿಕರು, ವಿದ್ಯಾವಂತರು ಮಾಡುವ ಕೆಲಸನಾ ಇದು ? ಎಂದು ಗರಂ ಆದರು.
ಇದನ್ನೂ ಓದಿ : ಅಪಘಾತವಾದ ಕಾರಿನಲ್ಲಿ ನನ್ನ ಮಗ ಇರಲಿಲ್ಲ : ಡಿಸಿಎಂ ಲಕ್ಷ್ಮಣ ಸವದಿ ಸ್ಪಷ್ಟನೆ