ಮಂಡ್ಯ: ಕೆಆರ್ಎಸ್ ಬಿರುಕು ವಿವಾದ ಜಿಲ್ಲೆಯಲ್ಲಿ ಜೆಡಿಎಸ್ ಮತ್ತು ಸಂಸದೆ ಸುಮಲತಾ ಅಂಬರೀಶ್ ಅವರ ಮಧ್ಯೆ ತಾರಕಕ್ಕೇರಿದೆ. ಸುಮಲತಾ ಅವರ ಪತಿ ಅಂಬರೀಶ್ ಅವಧಿಯಲ್ಲೇ ಅಕ್ರಮ ಗಣಿಗಾರಿಕೆ ನಡೆದಿದೆ ಎಂದು ಸಂಸದೆ ವಿರುದ್ಧ ಶಾಸಕ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ನಡೆಸಿದ್ದಾರೆ.
ಕೆಆರ್ಎಸ್ ಡ್ಯಾಂ ವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮೊದಲಿನಿಂದಲೂ ಡ್ಯಾಂ ಸುರಕ್ಷಿತವಾಗಿದೆ ಅಂತ ಹೇಳುತ್ತಲೇ ಇದ್ದೇನೆ. ಆದ್ರೆ ಸುಮಲತಾ ಅವರು ಬಿರುಕು ಇದೆ ಅಂತ ಯಾವ ಆಧಾರದ ಮೇಲೆ ಹೇಳುತ್ತಿದ್ದಾರೆ ಎಂದು ಪ್ರಶ್ನಿಸಿದರು.
ನ್ಯಾಷನಲ್ ಪ್ರಾಪರ್ಟಿ ಬಗ್ಗೆ ಅದ್ಹೇಗೆ ಬಹಿರಂಗ ಹೇಳಿಕೆ ನೀಡುತ್ತಿರಾ?. ಮೊದಲು ಬಂದು ಡ್ಯಾಂ ವೀಕ್ಷಣೆ ಮಾಡಿ ಎಂದು ಗುಡುಗಿದರಲ್ಲದೇ ಅಕ್ರಮ ಗಣಿಗಾರಿಕೆ ನಡೆದಿರೋದು ಅಂಬರೀಶ್ ಕಾಲದಲ್ಲಿ ಎಂದರಲ್ಲದೇ ಹಂಗರಳ್ಳಿಯ ಗುಂಡಿಗಳ ಮುಂದೆ ಅಂಬರೀಶ್ ಫೋಟೋ ತೆಗೆಸಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಅಂಬರೀಶ್ ಅವರ ಹೆಸರು ಹೇಳಿ ರಾಜಕೀಯ ಮಾಡುವ ನೀವು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ಎಂದರಲ್ಲದೇ ಸಿಬಿಐ ತನಿಖೆ ನಡೆಯಬೇಕಿರುವುದು ಅದರ ಬಗ್ಗೆ. ನಿಮಗೆ ಜನ ಸೇವೆ ಮಾಡುವ ಮನಸ್ಸಿಲ್ಲ. ಅಕ್ರಮ ಗಣಿಗಾರಿಕೆ ನಡೆಯುವ ಸ್ಥಳಗಳನ್ನು ಹುಡುಕಿ ವಸೂಲಿ ಮಾಡುತ್ತಿದ್ದೀರಿ ಎಂದು ಆರೋಪಿಸಿದರು.
ಸಿವಿಲ್ ಗ್ರೌಟಿಂಗ್ ಕೆಲಸಕ್ಕೆ ಅವಾರ್ಡ್: ಕೆಆರ್ಎಸ್ನಲ್ಲಿ ಸುಮಲತಾ ಹೇಳುವಂತೆ ಏನೂ ಇಲ್ಲ. ಡ್ಯಾಂ ಅತ್ಯಂತ ಸುರಕ್ಷಿತವಾಗಿದೆ. ಅಧಿಕಾರಿಗಳು ಬಹಳ ಬೇಜಾರು ಮಾಡಿಕೊಂಡಿದ್ದಾರೆ. ಅವರ ಸಿವಿಲ್ ಗ್ರೌಟಿಂಗ್ ಕೆಲಸಕ್ಕೆ ಅವಾರ್ಡ್ ಬಂದಿದೆ. ಡ್ಯಾಂ ಒಡೆದು ಹೋಗಿದೆ ಅಂತ 10 ಸಾರಿ ಹೇಳ್ತೀರಾ, ನಿಮಗೆ ನಾಚಿಕೆ ಆಗಬೇಕು. ಡ್ಯಾಂಗೆ ಪೂಜೆ ಮಾಡಿಸುವಂತೆ ಸಚಿವ ನಾರಾಯಣ ಗೌಡರಿಗೆ ಹೇಳುತ್ತೇನೆ ಎಂದರು.
ಸುಮಲತಾ ಏನು ಪ್ರಧಾನಿ ಅಲ್ಲ: ಸುಮಲತಾ ಗಣಿ ಪ್ರದೇಶ ವೀಕ್ಷಣೆ ಮಾಡಿ ಕ್ರಮ ಕೈಗೊಳ್ಳಲು ಇವ್ರೇನು ಪ್ರಧಾನಿ ಅಲ್ಲ, ಮಂತ್ರಿಯೂ ಅಲ್ಲ ಎಂದು ವಾಗ್ದಾಳಿ ನಡೆಸಿದರು. ಇವ್ರು ನಿನ್ನೆ ಗಣಿ ವೀಕ್ಷಣೆಗೆ ಬಂದಾಗ ಸುಮಲತಾ ಬೆಂಬಲಿಗರು ಜಿಲ್ಲಾಡಳಿತದ ಅಧಿಕಾರಿಗಳ ಮೇಲೆ ಪ್ರಶ್ನೆ ಮೇಲೆ ಪ್ರಶ್ನೆ ಹಾಕಿ ತಬ್ಬಿಬ್ಬು ಮಾಡಿ ದೌರ್ಜನ್ಯ ಎಸಗಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಜಿಲ್ಲಾಡಳಿತ ಡಿಸಿ ಸೇರಿ ಅಧಿಕಾರಿಗಳನ್ನು ಪ್ರಶ್ನೆ ಮಾಡಲು ಇವ್ರೆಲ್ಲ ಯಾರು ಅಂತಾ ಬೆಂಬಲಿಗರ ವಿರುದ್ಧ ಹರಿಹಾಯ್ದ ಶಾಸಕರು ಇದನ್ನು ಚುನಾವಣೆ ವೇಳೆ ಬಿಚ್ಚಿಡಬೇಕಾಗುತ್ತೆ ಅಂತಾ ಸುಮಲತಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.