ಮಂಡ್ಯ: ಪುಟ್ಗೋಸಿ 2.5 ಕೋಟಿ ಅನುದಾನ ತಂದು ಹಂಚೋದು ಎಂಪಿ ಕೆಲಸ ಅಲ್ಲ ಎಂದು ಸಂಸದೆ ಸುಮಲತಾ ವಿರುದ್ಧ ಪಾಂಡವಪುರ ಶಾಸಕ ಸಿ.ಎಸ್. ಪುಟ್ಟರಾಜು ವಾಗ್ದಾಳಿ ನಡೆಸಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದರು KRS ಡ್ಯಾಂ ಬಿರುಕು ಬಿಟ್ಟಿದೆ ಅಂತಾರೆ. ಆ ಡ್ಯಾಂ ಪರಿಶೀಲನೆಗೆ ಬಂದರೆ ಅವರನ್ನ ರೆಡ್ ಕಂಬಳಿ ಹಾಕಿ ಕರೆದುಕೊಂಡು ಹೋಗುತ್ತೇನೆ. ಅಲ್ಲದೇ ಮೊದಲೇ ಸಿನಿಮಾ ನಟಿ ಅವರು, ತೊಂದರೆ ಆಗೋದು ಬೇಡ. ಅದಕ್ಕೆ ರೆಡ್ ಕಂಬಳಿ ಹಾಸಿ ಕರೆದುಕೊಂಡು ಹೋಗುತ್ತೇನೆ ಎಂದು ಕಿಡಿಕಾರಿದರು.
’’ಸ್ವಾಭಿಮಾನದ ಹೆಸರು ಹೇಳಿ ಗೆದ್ದು ಹೋದಲವ್ವ. ಹೊಟ್ಟೆಗೆ ಹಿಟ್ಟಿಲ್ಲ, ಆಕ್ಸಿಜನ್ ಬೆಡ್ ಇಲ್ಲ ಕೊಡಿಸು ಬಾ’’ ಎಂದು ಸಂಸದೆಯನ್ನ ಜನರು ಕರೆಯುತ್ತಿದ್ದಾರೆ. ಜಿಲ್ಲೆಯ ಎಂಎಲ್ಎ ಗಳು ಕೆಲಸ ಮಾಡುತ್ತಿಲ್ಲ ಎನ್ನುತ್ತಾರೆ. ಆದರೆ, ರಾತ್ರಿ 2 ಗಂಟೆವರೆಗೆ ಬೆಡ್ ಕೊಡಿಸೋದು, ಬೆಳಗ್ಗೆ ಎದ್ದರೆ ಸತ್ತವರ ಮಣ್ಣು ಮಾಡೋದು. ಕೇವಲ 2 ಗಂಟೆ ನಿದ್ದೆ ಮಾಡಿ ನಾವು ಜನರ ಸೇವೆ ಮಾಡುತ್ತಿದ್ದೇವೆ. ಈಗ ಎಂಎಲ್ಎ ಗಳು ಜಿಲ್ಲೆಯಲ್ಲಿ ಕೆಲಸ ಮಾಡ್ತಿಲ್ವ, ಎಂಬುದನ್ನ ಪತ್ರಕರ್ತರು ತೀರ್ಮಾನ ಮಾಡಿ ಎಂದು ಸಂಸದೆ ವಿರುದ್ಧ ಕಿಡಿಕಾರಿದರು.
ಸರ್ಕಾರಿ ಕೋಟಾದ ಆಕ್ಸಿಜನ್ ಅನ್ನು ನಾನು ಕೊಡುತ್ತಿದ್ದೇನೆ ಎನ್ನುವುದು ಎಂಪಿ ಕೆಲಸವಾ.? ಎಂದು ಪ್ರಶ್ನಿಸಿದ ಅವರು, ಎಸ್ಎಂ ಕೃಷ್ಣ ನೂರು ಸಿಲಿಂಡರ್ ಕೊಡುಗೆ ಕೊಟ್ಟಾಗ ಯಾವ ಪ್ರಚಾರವು ಪಡೆಯಲಿಲ್ಲ ಇದು ದೊಡ್ಡವರ ಗುಣ ಎಂದರು.