ಮಂಡ್ಯ: ಕೆ.ಆರ್.ಪೇಟೆ ತಾಲ್ಲೂಕಿನ ಶೀಳನೆರೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಗೆ ಬಿಜೆಪಿ ಶಾಸಕ ನಾರಾಯಣಗೌಡ ಮೊದಲ ಬಾರಿಗೆ ಗ್ರಾಮ ಸಂಚಾರ ನಡೆಸಿದ್ದು, ಗ್ರಾಮಕ್ಕೆ ಆಗಬೇಕಾದ ಅಭಿವೃದ್ಧಿ ಕಾಮಗಾರಿಗಳು, ಹಾಗೂ ಗ್ರಾಮಸ್ಥರ ಅಹವಾಲು ಸ್ವೀಕಾರ ಮಾಡಿದರು.
ಮೊದಲ ಬಾರಿಗೆ ಗ್ರಾಮ ಸಂಚಾರ ಮಾಡಿರುವ ನಾರಾಯಣಗೌಡ, ನಂತರ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಮುಖ್ಯಮಂತ್ರಿಗಳು ನಮ್ಮ ಜಿಲ್ಲೆಯವರಾದ್ದರಿಂದ ನನಗೆ ಯಾವುದೇ ಖಾತೆ ನೀಡಿದರೂ ಕೆಲಸ ನಿರ್ವಹಿಸುವೆ. ಕೆಲಸ ಮಾಡುವವರಿಗೆ ಯಾವ ಖಾತೆಯಾದ್ರು ಆಸಕ್ತಿಯುತವಾಗಿರಲಿದೆ ಎಂದರು.
ಪ್ರಣಾಳಿಕೆ ಪ್ರಕಾರ ಕ್ಷೇತ್ರದ ಅಭಿವೃದ್ಧಿಗೆ ಎಷ್ಟು ಹಣವನ್ನು ಬಿಡುಗಡೆ ಮಾಡಬೇಕಾಗುತ್ತದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಒಂದು ಸಾವಿರ ಕೋಟಿಗಿಂತಲೂ ಅಧಿಕ ಅನುದಾನವನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ್ದಾರೆ,ಇದು ಹಂತ ಹಂತವಾಗಿ ದೊರೆಯಲಿದ್ದು, ನಮ್ಮ ತಾಲ್ಲೂಕು ಒಂದು ಮಾದರಿ ತಾಲ್ಲೂಕು ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.