ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹೋಗುತ್ತಿರುವುದು ನಿಂತಿದೆ. ಪ್ರತಿಷ್ಠೆಗಾಗಿ ಕಾವೇರಿ ಹೋರಾಟ ಮಾಡುವುದು ಬೇಡ ಎಂದು ಶಾಸಕ ಗಣಿಗ ರವಿಕುಮಾರ್ ಹೇಳಿದ್ದಾರೆ. ಮಂಡ್ಯ ನಗರದ ಗಾಂಧಿ ಭವನದಲ್ಲಿಂದು ಕನ್ನಡ ಸೇನೆ ಕರ್ನಾಟಕ ಸಹಯೋಗದಲ್ಲಿ ನಡೆದ ಕನ್ನಡ ಜಾಗೃತಿ ಸಮಾವೇಶ ಹಾಗೂ ಹಾಸ್ಯ, ಮಿಮಿಕ್ರಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಸೇನೆ ಜಿಲ್ಲಾಧ್ಯಕ್ಷ ಹೆಚ್.ಸಿ.ಮಂಜುನಾಥ್ ನನಗೆ ಆತ್ಮೀಯರು. ಆದರೂ ಅವರು ನನ್ನ ವಿರುದ್ಧವೇ ಪ್ರತಿಭಟನೆ ಮಾಡುತ್ತಾರೆ. ಕಾವೇರಿ ಹೋರಾಟದಲ್ಲಿ ನನಗೆ ವಿರುದ್ಧ ಧಿಕ್ಕಾರ ಕೂಗುತ್ತಾರೆ. ವಾಸ್ತವವಾಗಿ ರಾಜ್ಯ ಸರ್ಕಾರ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವ ವಿರುದ್ಧ ಮೊದಲು ದನಿ ಎತ್ತಿದವನೇ ನಾನು. ಆ ನಂತರ ಉಸ್ತುವಾರಿ ಸಚಿವರ ಜೊತೆ ಮಾತುಕತೆ ನಡೆಸಿ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾಗಿ ರೈತರ ಸ್ಥಿತಿಗತಿ ಬಗ್ಗೆ ಮನವರಿಕೆ ಮಾಡಿಕೊಟ್ಟು ತಮಿಳುನಾಡಿಗೆ ಹರಿಸುತ್ತಿದ್ದ ನೀರನ್ನು ನಿಲ್ಲಿಸಿದ್ದೇವೆ ಎಂದು ಹೇಳಿದರು.
ಹೀಗಿದ್ದರೂ ಮಂಡ್ಯದಲ್ಲಿ ಪ್ರತಿಷ್ಠೆಗಾಗಿ ಕಾವೇರಿ ಹೋರಾಟ ನಡೆಯುತ್ತಿದೆ. ಒಂದು ವೇಳೆ ಸರ್ಕಾರ ತಮಿಳುನಾಡಿಗೆ ಮತ್ತೆ ನೀರು ಹರಿಸಿದರೆ ಹೋರಾಟ ನಡೆಸಲಿ. ಆದರೆ ನೀರು ನಿಲ್ಲಿಸಿದ ನಂತರವೂ ಹೋರಾಟ ನಡೆಯುತ್ತಿರುವುದು ಪ್ರತಿಷ್ಠೆ ಅಲ್ಲವೇ ಎಂದು ಪ್ರಶ್ನಿಸಿದರು.
ಕನ್ನಡ ನಾಡು-ನುಡಿ ವಿಚಾರದಲ್ಲಿ ಕನ್ನಡ ಸೇನೆಯ ಹೋರಾಟಕ್ಕೆ ಜಯವಾಗಲಿ. ನಾವು ನಿಮ್ಮೊಡನೆ ಇರುತ್ತೇವೆ. ಸರ್ಕಾರ ಕನ್ನಡ ಪರ ಹೋರಾಟಗಾರರ ರಕ್ಷಣೆ ಮಾಡುತ್ತಿದೆ. ನಾವು ರೈತಪರ ಇದ್ದೇವೆ ಎಂದು ಗಣಿಗ ರವಿಕುಮಾರ್ ಭರವಸೆ ನೀಡಿದರು.
ಇದನ್ನೂ ಓದಿ: ಕೆಲವು ಅಧಿಕಾರಿಗಳು ರಾಜಕಾರಣ ಮಾಡುತ್ತಿದ್ದಾರೆ, ಮಾಡಲಿ ಸಮಯ ಬರುತ್ತೆ: ಡಿಕೆಶಿ