ಮಂಡ್ಯ: ಒಂದೇ ಗ್ರಾಮದ 25 ಜನರಿಗೆ ಕೊರೊನಾ ಪಾಸಿಟಿವ್ ತಗುಲಿದ್ದು ಪಾಂಡುಪುರ ತಾಲೂಕಿನ ತಿಮ್ಮನಕೊಪ್ಪಲು ಗ್ರಾಮವನ್ನು ಸೀಲ್‌ಡೌನ್ ಮಾಡಲಾಗಿದೆ. ಈ ಗ್ರಾಮಕ್ಕೆ ಇಂದು ಶಾಸಕ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ವೈದ್ಯರು ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿತು.
ದೊಡ್ಡಬ್ಯಾಡರಹಳ್ಳಿ ಗ್ರಾ.ಪಂ ವ್ಯಾಪ್ತಿಗೆ ಸೇರಿದ ತಿಮ್ಮನಕೊಪ್ಪಲು ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಅಂತ್ಯಸಂಸ್ಕಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಸೇರಿಕೊಂಡಿದ್ದರು. ನಂತರ ಕೆಲವರಿಗೆ ಕೊರೊನಾ ಲಕ್ಷಣ ಕಾಣಿಸಿಕೊಂಡು ಪರೀಕ್ಷೆ ಮಾಡಿಸಿದಾಗ 25 ಜನರಿಗೆ ಪಾಸಿಟಿವ್ ಪತ್ತೆಯಾಗಿತ್ತು.
ಈ ವಿಷಯ ತಿಳಿದ ಶಾಸಕ ಸಿ.ಎಸ್.ಪುಟ್ಟರಾಜು, ತಹಶೀಲ್ದಾರ್ ಪ್ರಮೋದ್ ಪಾಟೀಲ್ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ. ಸಿ.ಎ ಅರವಿಂದ್ ಅವರಿಗೆ ಸೂಚಿಸಿ ಗ್ರಾಮದಲ್ಲಿ ಎಲ್ಲರಿಗೂ ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಿ ಮುಂಜಾಗೃತ ಕ್ರಮಗಳನ್ನು ಜರುಗಿಸಿ ಎಂದು ಸೂಚಿಸಿದ್ದರು.
ಸೋಂಕು ಪರೀಕ್ಷೆ ಕಡ್ಡಾಯ:
ತಿಮ್ಮನಕೊಪ್ಪಲು ಗ್ರಾಮವನ್ನು ಈಗ ಸೀಲ್‌ಡೌನ್ ಮಾಡಲಾಗಿದೆ. ಗ್ರಾಮಸ್ಥರಿಗೆ ಕೊರೊನಾ ಪರೀಕ್ಷೆ ನಡೆಸಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಎಲ್ಲರಿಗೂ ಕಡ್ಡಾಯವಾಗಿ ಸೋಂಕು ಪರೀಕ್ಷೆ ನಡೆಸಲಾಗುತ್ತಿದೆ. ಸರ್ಕಲ್ ಇನ್ಸ್ಪೆಕ್ಟರ್ ಕೆ.ಪ್ರಭಾಕರ್ ಗ್ರಾಮದಲ್ಲಿ ಸಂಚರಿಸಿ ಗ್ರಾಮಸ್ಥರು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಬೇಕು. ಪರೀಕ್ಷೆಗೆ ತಪ್ಪಿಸಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಗ್ರಾಮ ಒಟ್ಟು 650ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಎರಡು ದಿನದಲ್ಲಿ 25 ಮಂದಿಗೆ ಪಾಸಿಟಿವ್ ಕಾಣಿಸಿಕೊಂಡಿದೆ. 319 ಮಂದಿಗೆ ಪರೀಕ್ಷೆ ನಡೆಸಲಾಗಿದೆ. ಇನ್ನುಳಿದ ಗ್ರಾಮಸ್ಥರಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಮಕ್ಕಳು, ಮಹಿಳೆಯರೂ ಸೇರಿದಂತೆ ಎಲ್ಲರೂ ಪರೀಕ್ಷೆಗೆ ಒಳಗಾಗುವಂತಹ ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಗ್ರಾಪಂ ಆಡಳಿತ ಮನವಿ ಮಾಡಿಕೊಂಡಿದ್ದಾರೆ.
ಲಸಿಕೆ ಹಾಕಿಸಿಕೊಳ್ಳಿ:
ಗ್ರಾಮದಲ್ಲಿ 184 ಮಂದಿಗೆ ಮೊದಲನೇ ಡೋಸ್ ಲಸಿಕೆ ಹಾಕಲಾಗಿದೆ. 55 ಮಂದಿ ಎರಡನೇ ಡೋಸ್ ಹಾಕಿಸಿಕೊಂಡಿದ್ದಾರೆ. ಇನ್ನೂ ಅನೇಕರಿಗೆ ಲಸಿಕೆ ಹಾಕಬೇಕಾಗಿದೆ. ಪರೀಕ್ಷೆ ನಡೆಸಿದ ನಂತರ ಲಸಿಕೆ ಹಾಕಲು ನಿರ್ಧರಿಸಲಾಗಿದೆ.