ಮಂಡ್ಯ : ಪಾಂಡವಪುರ ತಾಲೂಕಿನ ಪ್ರವಾಸಿಕ್ಷೇತ್ರ ತೊಣ್ಣೂರು ಕೆರೆಯಲ್ಲಿ ನೀರು ತುಂಬಿಕೊಂಡು ಈ ಭಾಗದ ರೈತರ ಬೇಸಾಯಕ್ಕೆ ಸಮರ್ಪಕವಾಗಿ ನೀರು ಒದಗಿಸುತ್ತಿದೆ. ಈ ಸಾರಿ ತುಂಬಿ ತುಳುಕುತ್ತಿರುವ ಈ ಕೆರೆಗೆ ಶಾಸಕ ಸಿ. ಎಸ್ ಪುಟ್ಟರಾಜು ಹಾಗೂ ಪತ್ನಿ ನಾಗಮ್ಮ ಪುಟ್ಟರಾಜು ದಂಪತಿ ಬಾಗಿನ ಅರ್ಪಿಸಿದರು.
ಪಾಂಡವಪುರ ತಾಲೂಕಿನ ತೊಣ್ಣೂರು ಕೆರೆಯಲ್ಲಿ ನೀರು ತುಂಬಿಕೊಂಡು ಈ ಭಾಗದ ನೂರಾರು ಎಕರೆ ಜಮೀನಿಗೆ ನೀರು ಒದಗಿಸಿದೆ ಹಾಗೂ ಕೆರೆ ಕಟ್ಟೆಗಳಿಗೆ ನೀರು ತುಂಬಿಸಿರುವ ಹಿನ್ನೆಲೆ ತೊಣ್ಣೂರು ಕೆರೆಗೆ ಶಾಸಕ ಸಿ. ಎಸ್ ಪುಟ್ಟರಾಜು ದಂಪತಿ ನೇತೃತ್ವದಲ್ಲಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಲಾಯ್ತು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿ. ಎಸ್ ಪುಟ್ಟರಾಜು ಕಾಂಗ್ರೆಸ್ಗೆ ಬರ್ತಾರೆ ಅನ್ನೋ ಮಾಜಿ ಶಾಸಕ ಮಾಗಡಿ ಬಾಲಕೃಷ್ಣ ಹೇಳಿಕೆ ವಿಚಾರ ನನ್ನನ್ನ ಬಾಲಕೃಷ್ಣ ದತ್ತು ಪಡೆದಿದ್ದಾರಾ? ನನ್ನ ಬಗ್ಗೆ ಮಾತನಾಡುವ ಮೊದಲು ಯೋಚನೆ ಮಾಡಿ ಮಾತನಾಡಬೇಕು ಎಂದರು.
ಬಿಡದಿ ಪುರಸಭೆ ಚುನಾವಣೆ ಗೆಲ್ಲಲು ಸ್ಟಂಟ್ ಹಾಕಲು ಹೋಗಿ ಠುಸ್ ಆಗಿದ್ದಾರೆ. ಅದಕ್ಕೀಗ ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ನಾನು JDS ಬಿಡಲ್ಲ. ಈ ಪಕ್ಷದಲ್ಲೇ ಇರ್ತೇನೆ ಎಂದರು.
ದೇವಸ್ಥಾನವನ್ನು ಸರ್ಕಾರದಿಂದ ಮುಕ್ತಿಗೊಳಿಸುವ ವಿಚಾರವಾಗಿ ಮಾತನಾಡಿದ ಪುಟರಾಜು, ದೇವಸ್ಥಾನ ಮಠ-ಮಂದಿರಗಳನ್ನು ಸರ್ಕಾರ ಉಳಿಸಿಕೊಳ್ಳಬೇಕು. ಸರ್ಕಾರವೇ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ನಾವು ಸದನದಲ್ಲಿ ಇದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.