ಮಂಡ್ಯ: ಕೊಠಡಿ ಸಮಸ್ಯೆ ಎದರುಸುತ್ತಿರುವ ಶ್ರೀರಂಗಪಟ್ಟಣದ ಮೊರಾರ್ಜಿ ವಸತಿ ಶಾಲೆಗೆ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಳೆದ 10 ವರ್ಷಗಳಿಂದ ವಸತಿ ಶಾಲೆ ಸ್ವಂತ ಕಟ್ಟಡವಿಲ್ಲದೇ ಸಮಸ್ಯೆ ಎದುರಿಸುತ್ತಿತ್ತು. ಹೀಗಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರ ಮನವಿ ಮೇರೆಗೆ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು, ಶೀಘ್ರವೇ ಕಟ್ಟಡ ನಿರ್ಮಾಣದ ಭರವಸೆ ನೀಡಿದರು. ಜೊತೆಗೆ ಜಾಗದ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಲೆಯಲ್ಲಿ ಬಿಸಿ ನೀರು, ಕುಡಿಯುವ ನೀರು, ಹಾಸಿಗೆ ವ್ಯವಸ್ಥೆ ಸೇರಿದಂತೆ ಹಲವು ಸಮಸ್ಯೆ ಇರುವುದು ಕಂಡುಬಂದಿದೆ. ಈ ಜಾಗ ವಸತಿ ಶಾಲೆಗೆ ಯೋಗ್ಯವಲ್ಲ ಎಂಬ ವಿದ್ಯಾರ್ಥಿಗಳ ಅಹವಾಲು ಸ್ವೀಕರಿಸಿದ ಸಚಿವರು, ಮುಂದಿನ ಶೈಕ್ಷಣಿಕ ವರ್ಷದಿಂದ ಹೊಸ ಕಟ್ಟಡ ಒದಗಿಸುವುದಾಗಿ ತಿಳಿಸಿದರು.
ಎಸ್ಎಸ್ಎಲ್‌ಸಿ ಪೂರಕ ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್ ಕುರಿತು ಪ್ರತಿಕ್ರಿಯಿಸುತ್ತಾ, ಇದನ್ನು ದೊಡ್ಡ ವಿಷಯವಾಗಿ ಪರಿಗಣಿಸಬಾರದು, ಮುಖ್ಯ ಪರೀಕ್ಷೆ ಪ್ರಶ್ನೆಪತ್ರಿಕೆ ಬಹಿರಂಗವಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದರು.