ಮಂಡ್ಯ : ಸಭೆ ನಡೆಸುತ್ತಿದ್ದ ವೇಳೆ ಧ್ವನಿವರ್ಧಕ (ಮೈಕ್) ಕೈಕೊಟ್ಟ ಕಾರಣಕ್ಕೆ ಪೌರಾಡಳಿತ ಸಚಿವ ಕೆ ಸಿ ನಾರಾಯಣಗೌಡ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಶ್ರೀರಂಗಪಟ್ಟಣದಲ್ಲಿ ಅಕ್ಟೋಬರ್ 9,10 ಮತ್ತು 11ರಂದು ದಸರಾ ನಡೆಸಲು ತೀರ್ಮಾನಿಸಲಾಗಿದೆ. ಈ ಬಾರಿ ದಸರಾದಲ್ಲಿ ಆನೆಗಳು ಭಾಗವಹಿಸುವ ಸಾಧ್ಯತೆ ಇದ್ದು, ಆನೆಗಳನ್ನು ಕಳುಹಿಸಿ ಕೊಡುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಲಾಗಿದೆ.
ಅಲ್ಲದೆ ಗ್ರಾಮೀಣ ಕ್ರೀಡಾಕೂಟಕ್ಕೆ ಪ್ರೋತ್ಸಾಹ ನೀಡಲಾಗುವುದು. ಕಳೆದ ಬಾರಿಗಿಂತ ಈ ಬಾರಿ ವಿಜೃಂಭಣೆಯಿಂದ ಆಚರಣೆ ಮಾಡಲು ನಿರ್ಧರಿಸಲಾಗಿದೆ. ಈ ಸಂಬಂಧ ಸಚಿವರು ಸಭೆ ನಡೆಸಿದರು.
ಸಚಿವರು ಅಧಿಕಾರಿಗಳಿಗೆ ಮಾಹಿತಿ ನೀಡುವ ವೇಳೆ ಧ್ವನಿವರ್ಧಕ ಕೈಕೊಟ್ಟ ಕಾರಣ ಅಧಿಕಾರಗಳ ಮೇಲೆ ಗರಂ ಆದರು. ಕೋಪದಲ್ಲಿ ಮೈಕ್ ತಳ್ಳಿ ಆಕ್ರೋಶ ಹೊರ ಹಾಕಿದರು. ನಿಮಗೆ ಶಿಸ್ತಾಗಿ ಸಭೆ ನಡೆಸಲು ಆಗಲ್ವಾ?, ಯಾವುದನ್ನು ಪರಿಶೀಲಿಸದೆ ಸೀಟ್ ಹಾಕೊಂಡು ಕುಳಿತುಕೊಳ್ಳೋಕೆ ಬರ್ತೀರಾ ಎಂದು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು. ಶ್ರೀರಂಗಪಟ್ಟಣ ತಹಶೀಲ್ದಾರ್ ಶ್ವೇತಾರವರ ಮೇಲೆ ಕೋಪಗೊಂಡ ಸಚಿವರು, ನೀವೆಲ್ಲಾ ಕೆಲಸ ಮಾಡಲು ಯೋಗ್ಯರಲ್ಲ ಎಂದು ಸಿಡಿಮಿಡಿಗೊಂಡರು.
ಇದನ್ನೂ ಓದಿ: ಹಿಂದುಳಿದ ವರ್ಗದವರು ಜಾತಿ ಸಮಾವೇಶ ನಡೆಸುವುದು ಅಪರಾಧವಲ್ಲ : ವಿಪಕ್ಷ ನಾಯಕ ಸಿದ್ದರಾಮಯ್ಯ