ಮಂಡ್ಯ: ಮೈಶುಗರ್ ಸಕ್ಕರೆ ಕಾರ್ಖಾನೆಯಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದೆ ಎಂಬ ವದಂತಿಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಇಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಹೊಸ ವಾಹನ ರೋಡ್ಗೆ ಬಿಟ್ಟರೆ ಪಂಚರ್ ಆಗುತ್ತದೆ, ಬ್ರೇಕ್ ಡೌನ್ ಆಗುತ್ತದೆ. ಅಂತಹುದರಲ್ಲಿ ನೂರಾರು ವರ್ಷಗಳ ಇತಿಹಾಸವಿರುವ ಶುಗರ್ ಫ್ಯಾಕ್ಟರಿಯನ್ನು ರನ್ ಮಾಡುತ್ತಿದ್ದೇವೆ. ಕೆಲವರು ಏನಾದರೂ ಸಮಸ್ಯೆಗಳಿದ್ದರೆ ಸಲಹೆ ನೀಡುವುದನ್ನು ಬಿಟ್ಟು ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ, ಅಂತವರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ ಎಂದರು.
ಶುಗರ್ ಫ್ಯಾಕ್ಟರಿ ನಿಂತೇ ಹೋಗಿದೆ ಎಂದು ಇವತ್ತು ಗಾಬರಿಯಾಗಿ ನಮ್ಮ ಶಾಸಕರಿಗೆ ಕರೆ ಮಾಡಿಕೊಂಡು ಇಲ್ಲಿಗೆ ಬಂದೆ. ದಿನದಿಂದ ದಿನಕ್ಕೆ ಕ್ರಷಿಂಗ್ ನೂರು ಟನ್ ಹೆಚ್ಚಳವಾಗುತ್ತಿದೆ. ನಿನ್ನೆ 2,900 ಟನ್ ಕ್ರಷಿಂಗ್ ಆಗಿದೆ. ಇಲ್ಲಿಗೆ ಸರಾಸರಿ 30 ಸಾವಿರ ಆಗಿದೆ . ಪ್ರಾರಂಭದಲ್ಲಿ ಒಂದೂವರೆ ಸಾವಿರದಿಂದ ಶುರುವಾಗಿ, ಇವತ್ತಿಗೆ 30 ಸಾವಿರ ಟನ್ ಕಬ್ಬು ಕ್ರಷಿಂಗ್ ಆಗಿದೆ. ಇನ್ನು ಸ್ವಲ್ಪ ಪ್ರಗತಿಯಾಗುತ್ತದೆ ಎಂದರು.
ನಾವು ರೈತರಿಗೆ ಹಣವನ್ನು ಪಕ್ಕದ ಫ್ಯಾಕ್ಟರಿಯವರು ಕೊಟ್ಟಷ್ಟೇ ಕೊಡುತ್ತೇವೆ ಮತ್ತು ಅದೇ ಸಮಯಕ್ಕೆ ಕೊಡುತ್ತೇವೆ. ನಮ್ಮದು ಒಂದೇ ಹೋರಾಟ ಶುಗರ್ ಫ್ಯಾಕ್ಟರಿ ನಿಲ್ಲಿಸಬಾರದು ಎಂಬುದಾಗಿದೆ. ಇದನ್ನು ಏನಾದರೂ ಮಾಡಿ ನಿಲ್ಲಿಸಲೇ ಬೇಕು ಎಂದು ಒಂದು ವರ್ಗ ಸಂಚು ಮಾಡುತ್ತಿದೆ. ಇಲ್ಲಿ ಬೀಸಿ ನೀರನ್ನು ತೆಗೆದುಕೊಂಡು ಹೋಗಿ ಅದನ್ನು ಜ್ಯೂಸ್ ಎಂದು ಕೊಟ್ಟು ತಪ್ಪು ಮಾಹಿತಿ ಕೊಟ್ಟಿದ್ದಾರೆ. ತಪ್ಪು ಮಾಹಿತಿಯನ್ನು ಯಾರು ವೈರಲ್ ಮಾಡಿದ್ದಾರೆ ಅವರು ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನಾನು ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡುತ್ತೇನೆ ಎಂದು ಹೇಳಿದರು.
ಮಂಡ್ಯ ಜಿಲ್ಲೆಯ ಜನರಿಗೆ ವಿನಂತಿ ಮಾಡುತ್ತೇನೆ ಶುಗರ್ ಫ್ಯಾಕ್ಟರಿ ದಿನೇ ದಿನೆ ಉತ್ತವಾದ ರೀತಿಯಲ್ಲಿ ನಡೆಯುತ್ತದೆ. ಹೊಸ ಶುಗರ್ ಫ್ಯಾಕ್ಟರಿಯನ್ನು ಮಾಡುತ್ತೇವೆ. ನಮ್ಮನ್ನು ಅಡ್ಡದಾರಿಗೆ ಎಳೆಯುವ ಪ್ರಯತ್ನವನ್ನು ಮಾಡಬೇಡಿ, ಇದು ನಿಮ್ಮದು, ನಿಮ್ಮ ಫ್ಯಾಕ್ಟರಿ, ನಿಮ್ಮ ಜಿಲ್ಲೆ , ನಿಮ್ಮ ಸಮಸ್ಯೆ ದಯಮಾಡಿ ರೈತೆರಿಗೆ ಮಿಸ್ ಗೈಡ್ ಮಾಡಿ, ಎಲ್ಲರನ್ನೂ ಅಡ್ಡ ದಾರಿಗೆ ಎಳೆಯುವ ಪ್ರಯತ್ನ ಮಾಡಬೇಡಿ ಎಂದು ಮನವಿ ಮಾಡಿದರು.
ಈ ತಿಂಗಳಲ್ಲಿ ಎಲ್ಲವನ್ನು ಸರಿಪಡಿಸಿ ಇನ್ನು ಉತ್ತಮವಾದ ರೀತಿಯಲ್ಲಿ ಕ್ರಷಿಂಗ್ ನಡೆಯುತ್ತದೆ. ಎರಡು ಉತ್ತಮ ಗುಟ್ಟದ ಎಸ್ 30 ಹಾಗೂ ಎಮ್ 30 ಸಕ್ಕರೆಯನ್ನು ಕಾರ್ಖಾನೆಯಲ್ಲಿ ಉತ್ಪಾದಿಸಲಾಗಿದೆ ಹಾಗೂ ಇವುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಸಹ ಇದೆ. ಹೊಸ ಕಬ್ಬು ಕ್ರಷಿಂಗ್ನಿಂದ 12 ಸಾವಿರ ಕ್ವಿಂಟಲ್ ಸಕ್ಕರೆ ಬಂದಿದೆ. ಅದನ್ನು ಒಳ್ಳೆಯ ರಿಯಾಯಿತಿ ದರದಲ್ಲಿ ರಫ್ತು ಮಾಡಲಾಗುವುದು ಎಂದರು. ಈ ವೇಳೆ, ಶಾಸಕ ರವಿಕುಮಾರ್ ಗಣಿಗ, ರಮೇಶ್ ಬಾಬು ಮತ್ತಿತರರು ಉಪಸ್ಥಿತರಿದ್ದರು.
ಮಹಿಳಾ ಕಾಲೇಜುಗಳ ಮೂಲ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಸದಾ ಮುಂದಿದೆ: ಮತ್ತೊಂದೆಡೆ, ಮಹಿಳಾ ಸರ್ಕಾರಿ ಕಾಲೇಜಿನ ಮೂಲ ಸೌಕರ್ಯಗಳಾದ ತರಗತಿಯ ಕೊಠಡಿಗಳು, ಶೌಚಾಲಯ, ರಸ್ತೆ ಸೇರಿದಂತೆ ಕಾಲೇಜಿನ ಬೇಡಿಕೆಗಳನ್ನು ಈಡೇರಿಸುವುದಾಗಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ಚಲುವರಾಯಸ್ವಾಮಿ ಭರವಸೆ ನೀಡಿದರು. ಇಂದು ಮಹಿಳಾ ಸರ್ಕಾರಿ ಕಾಲೇಜಿನ 2023 - 24 ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳಾ ಕಾಲೇಜುಗಳ ಮೂಲ ಸೌಲಭ್ಯಗಳ ಕೊರತೆ ನಿಗಿಸುವಲ್ಲಿ ನಮ್ಮ ಸರ್ಕಾರ ಸದಾ ಮುಂದಿದೆ. ಮಹಿಳಾ ಕಾಲೇಜಿಗೆ ಕಂಪ್ಯೂಟರ್ ಲ್ಯಾಬ್ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಮೊದಲ ಹಂತದಲ್ಲೇ ಕೊಡಿಸುವುದಕ್ಕೆ ಪ್ರಯತ್ನ ಪಡುತ್ತೇನೆ. ಮಹಿಳೆಯರು ಯಾವ ಕ್ಷೇತ್ರದಲ್ಲೂ ಕಡಿಮೆಯಿಲ್ಲ. ರಾಜಕೀಯ, ಸಿನಿಮಾ, ವಿಜ್ಞಾನ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಇದು ಮಹಿಳಾ ಸಬಲೀಕರಣಕ್ಕೆ ಇಟ್ಟ ದಾಪುಗಾಲಾಗಿದೆ ಎಂದರು.
ಇದನ್ನೂ ಓದಿ:ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಬಿಜೆಪಿ ಅಪಪ್ರಚಾರ: ಸಚಿವ ಮಧು ಬಂಗಾರಪ್ಪ ಆರೋಪ