ಮಂಡ್ಯ: ಕೊರೊನಾ ಬಿಕ್ಕಟ್ಟಿನ ನಡುವೆ ಕೇಂದ್ರ ಬಜೆಟ್ ಮಂಡನೆಯಾಗಿದ್ದು, 2021ರ ಬಜೆಟ್ ಅಭಿವೃದ್ಧಿ ಪರವಾದ ಬಜೆಟ್ ಆಗಿದೆ ಎಂದು ಮಂಡ್ಯದಲ್ಲಿ ಸಚಿವ ಕೆ.ಸಿ. ನಾರಾಯಣಗೌಡ ಪಕ್ಷವನ್ನು ಸಮರ್ಥಿಸಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ವೇಳೆ ರೆವಿನ್ಯೂ ಬಾರದೆ ಸರ್ಕಾರಕ್ಕೂ ಹೊರೆ ಬಿದ್ದಿದೆ. ಹೀಗಾಗಿ ಆರ್ಥಿಕತೆ ಸುಧಾರಿಸಿಕೊಳ್ಳಲು ಸ್ವಲ್ಪ ಸಮಯ ಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಯಾವ ತಪ್ಪನ್ನು ಮಾಡಿಲ್ಲ ಎಂದರು.
ಮಂಡ್ಯ ಶುಗರ್ ಫ್ಯಾಕ್ಟರಿ ಆರಂಭಿಸುವುದು ನನ್ನ ಗುರಿಯಾಗಿದೆ. ಒಂದು ವರ್ಷ ಪೇಮೆಂಟ್ ಬಾಕಿ ಇದ್ದರೂ ಉತ್ತರ ಕರ್ನಾಟಕದಲ್ಲಿ ಫ್ಯಾಕ್ಟರಿ ನಡೆಯುತ್ತದೆ. ಆದ್ರೆ ಪಾಂಡವಪುರದಲ್ಲಿ 30 ದಿನದ ಪೇಮೆಂಟ್ ಬಾಕಿ ಇದ್ರೂ ಮಾಲೀಕನಿಗೆ ತೊಂದರೆ ನೀಡಲಾಗುತ್ತಿದೆ. ಹೀಗಾದ್ರೆ ಫ್ಯಾಕ್ಟರಿ ನಡೆಸಲು ಯಾರು ಮುಂದೆ ಬರ್ತಾರೆ ಎಂದು ಪ್ರಶ್ನಿಸಿದ ಅವರು, ನೌಕರರ ಪ್ರತಿಭಟನೆಯಿಂದ ಫ್ಯಾಕ್ಟರಿ ನಿಂತಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ಈಗಾಗಲೇ ಮೈ ಶುಗರ್ ಫ್ಯಾಕ್ಟರಿ ನಡೆಸಲು ಸರ್ಕಾರ ನೀಡಿದ 400-500 ಕೋಟಿ ರೂ. ನಷ್ಟವಾಗಿದೆ. ಖಾಸಗಿಯವರಿಗೆ ಗುತ್ತಿಗೆ ನೀಡಿ ಕಾರ್ಖಾನೆ ನಡೆಸುವ ಚಿಂತನೆ ನಡೆದಿದೆ. ಕಾರ್ಖಾನೆಯ ಆಸ್ತಿ ರಕ್ಷಣೆಗಾಗಿ ಅಧ್ಯಕ್ಷರನ್ನ ನೇಮಿಸಲಾಗಿದೆ ಎಂದರು.
ನಿವೃತ್ತಿ ಹೊಂದಿದ ನೌಕರರಿಗೆ ಬಾಕಿ ಪಾವತಿಸಲು ಕಾರ್ಖಾನೆ ಸ್ಕ್ರಾಪ್ ಮಾರಲು ಸರ್ಕಾರದ ಆದೇಶವಿದೆ. ಆದರೆ ಈಗಾಗಲೇ 20.80 ಕೋಟಿ ರೂ. ಹಣವನ್ನ ವಿಆರ್‌ಎಸ್ ಪಡೆದ 208 ಜನ ನೌಕರರಿಗೆ ನೀಡಲಾಗಿದೆ. ಈ ಹಣ ಸರ್ಕಾರವೇ ನೀಡಿದೆ. ಸ್ಕ್ರಾಪ್ ಮಾರಿ ಹಣ ನೀಡಿದ್ದಲ್ಲ ಎಂದು ಸ್ಪಷ್ಟಪಡಿಸಿದರು.
ರೆವಿನ್ಯೂ ಇಲ್ಲದೆ ಕೆಲ ಅನುದಾನಗಳಿಗೆ ಸರ್ಕಾರ ತಡೆ ಹಿಡಿದಿತ್ತು. ಮಂಡ್ಯ ಸ್ಮಾರ್ಟ್ ಸಿಟಿ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ರಿಂಗ್ ರೋಡ್ ನಿರ್ಮಿಸಲು ಹೊಸ ಸರ್ವೇ ಮಾಡಿಸಲಾಗಿದೆ. ಮುಂದಿನ ಬಜೆಟ್ನಲ್ಲಿ ಜಿಲ್ಲೆಯ ಬಗ್ಗೆ ಮಂಡನೆ ಮಾಡಲು ತಿಳಿಸುತ್ತೇನೆ ಎಂದರು.