ಮಂಡ್ಯ: ರಾಜ್ಯದಲ್ಲಿ ಜೆಡಿಎಸ್ ಸಂಪೂರ್ಣ ನೆಲಕಚ್ಚಿದೆ. ರಾಮನಗರ, ಮಂಡ್ಯ, ಮೈಸೂರು, ಹಾಸನ ಜಿಲ್ಲೆಗಳಲ್ಲಿ ಬಿಜೆಪಿಯನ್ನು ಶಕ್ತಿಯುತವಾಗಿ ಕಟ್ಟುವ ಬದಲು ಯಡಿಯೂರಪ್ಪ ಅವರು, ಕುಮಾರಸ್ವಾಮಿಯೊಂದಿಗೆ ಸ್ನೇಹದ ರಾಜಕಾರಣ ಮಾಡುತ್ತಾ ಪಕ್ಷದ ಬೆಳವಣಿಗೆಗೆ ಹಿನ್ನಡೆ ಉಂಟು ಮಾಡುತ್ತಿದ್ದಾರೆ ಎಂದು ಸಚಿವ ಸಿ.ಪಿ ಯೋಗೇಶ್ವರ್ ಗಂಭೀರವಾಗಿ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜಿ.ಪಂ, ತಾ.ಪಂ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಸ್ಥಾನ ಹೊಂದಾಣಿಕೆಗಾಗಿ ಸಿಎಂ ಯಡಿಯೂರಪ್ಪ ಅವರೊಂದಿಗೆ ಒಳ ಒಪ್ಪಂದಕ್ಕೆ ಮುಂದಾಗಿದ್ದಾರೆ ಎಂದು ದೂರಿದರು.
ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಅವರ ಒಳ ಒಪ್ಪಂದಿಂದ ಕೆಲವು ಜಿಲ್ಲೆಗಳಲ್ಲಿ ಬಿಜೆಪಿ ಸಂಘಟನೆಗೆ ಸಮಸ್ಯೆಯಾಗಿದೆ. ಇದರಿಂದ ಬೇಸತ್ತಿರುವ ಪಕ್ಷದ ಕಾರ್ಯಕರ್ತರು ಅತಂತ್ರ ಸ್ಥಿತಿ ತಲುಪಿದ್ದಾರೆ ಎಂದು ನೋವು ವ್ಯಕ್ತಪಡಿಸಿದರು.
ಹಳೇ ಮೈಸೂರು ಪ್ರಾಂತ್ಯದಲ್ಲಿ 'ಕೈ' ನೆಲಕಚ್ಚಿದೆ:
ಹಳೇ ಮೈಸೂರು ಪ್ರಾಂತ್ಯದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ. ಇಂತಹ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಿ ಸಂಘಟನೆಗೆ ಬಳಸಿಕೊಳ್ಳಬೇಕಾದ ಸಂದರ್ಭದಲ್ಲಿ ಪಕ್ಷದ ನಾಯಕರು ಜೆಡಿಎಸ್‌ನೊಂದಿಗೆ ಒಳ ಒಪ್ಪಂದ ಮಾಡಿಕೊಳ್ಳುತ್ತಿರುವುದರಿಂದ ಮುಂದಿನ ಸ್ಥಳೀಯ ಚುನಾವಣೆಗಳಲ್ಲಿ ಪಕ್ಷಕೆ ಹಿನ್ನಡೆಯಾಗುವುದು ಕಟ್ಟಿಟ್ಟ ಬುತ್ತಿ ಎಂದರು.
ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಇದೆ:
ಮುಖ್ಯಮಂತ್ರಿ ಸ್ಥಾನಕ್ಕಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನಡುವೆ ಪೈಪೋಟಿ ನಡೆಯುತ್ತಿದೆ. ಮುಖ್ಯಮಂತ್ರಿ ಸ್ಥಾನವನ್ನು ಪಡೆಯಲೇಬೇಕೆಂಬ ಹಠಕ್ಕೆ ಬಿದ್ದಿರುವ ಸಿದ್ದರಾಮಯ್ಯ, ಚುನಾವಣೆಯಲ್ಲಿ ಸುರಕ್ಷಿತ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಹೀಗಾಗಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಸ್ಪರ್ಧಿಸುವ ಉದ್ದೇಶ ಹೊಂದಿದ್ದಾರೆ ಎಂದು ಹೇಳಿದರು.
ಚಿಣ್ಣರ ರೈಲು ಯೋಜನೆಗೆ 4 ಕೋಟಿ:
ಮದ್ದೂರು ತಾಲೂಕಿನ ಹನುಮಂತನಗರದಲ್ಲಿರುವ ಉದ್ಯಾವನವನಕ್ಕೆ ವಿಜ್ಞಾನ ಪಾರ್ಕ್, ಮಕ್ಕಳ ಚಿಣ್ಣರ ರೈಲು ಯೋಜನೆಯನ್ನ 4 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಕ್ಕೆ ತರಲು ಇಲಾಖೆ ವತಿಯಿಂದ ಅನುಮೋದನೆ ನೀಡಲಾಗಿದೆ ಎಂದರು.
ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಕಿಡಿ:
ಸಂಸದೆ ಸುಮಲತಾ ಅವರ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಅವರು ಲಘುವಾಗಿ ಮಾತನಾಡಿರುವುದು ಸರಿಯಲ್ಲ. ಈ ಮೊದಲು ರೈತ ಮಹಿಳೆ ಬಗ್ಗೆಯೂ ಅಶ್ಲೀಲವಾಗಿ ಮಾತನಾಡಿರುವುದನ್ನು ನಾವು ನೋಡಿದ್ದೇವೆ. ಮಾಜಿ ಮುಖ್ಯಮಂತ್ರಿಗಳಾಗಿ ಅವರ ನಡೆ ಮತ್ತು ನುಡಿಯನ್ನ ಬದಲಾವಣೆ ಮಾಡಿಕೊಳ್ಳಬೇಕು. ಮಂಡ್ಯ ಜಿಲ್ಲೆಯಲ್ಲಿ ಸಂಸದರ ಚುನಾವಣೆಯಲ್ಲಿ ತನ್ನ ಮಗನನ್ನ ಸೋಲಿಸಿದರೆಂಬ ಕಾರಣಕ್ಕಾಗಿ ಸುಮಲತಾ ವಿರುದ್ಧ ಈ ರೀತಿ ಮಾತನಾಡುವುದು ಅವರಿಗೆ ಶೋಭೆ ತರುವಂತದ್ದಲ್ಲ ಕಿಡಿಕಾರಿದರು.
ಹಿರಿಯ ರಾಜಕೀಯ ಮುತ್ಸದ್ದಿ ಬೇಗ ಗುಣಮುಖವಾಗುವಂತೆ ಪ್ರಾರ್ಥನೆ:
ಮಾಜಿ ಸಂಸದ ಜಿ.ಮಾದೇಗೌಡ ಅವರು, ಹಿರಿಯ ರಾಜಕೀಯ ಮುತ್ಸದ್ದಿಯಾಗಿದ್ದು ಅವರು ಅನಾರೋಗ್ಯಕ್ಕೆ ತುತ್ತಾಗಿರುವುದು ಅತೀವ ಬೇಸರ ತಂದಿದೆ. ಶೀಘ್ರವಾಗಿ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.