ಮಂಡ್ಯ: ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣ ಸಂಬಂಧ ವೈದ್ಯರು ಸೇರಿ 9 ಮಂದಿ ಆರೋಪಿಗಳನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಭ್ರೂಣ ಹತ್ಯೆಗೂ ಮೊದಲು ಭ್ರೂಣ ಲಿಂಗ ಪತ್ತೆ ಮಾಡಲು ಮಂಡ್ಯದ ಆಲೆಮನೆಯ ಶೆಡ್ಡಿನಲ್ಲಿ ಪ್ರತಿನಿತ್ಯ ಟೆಸ್ಟಿಂಗ್ ನಡೆಸಿಸುತ್ತಿದ್ದರು. ಮಂಡ್ಯ ತಾಲೂಕಿನ ಹುಳ್ಳೇನಹಳ್ಳಿ - ಹಾಡ್ಯ ಗ್ರಾಮದ ಕಬ್ಬಿನಗದ್ದೆಯ ಮಧ್ಯಭಾಗದಲ್ಲಿ ಇದ್ದ ಆಲೆಮನೆಯ ಶೆಡ್ನಲ್ಲಿ ಈ ದಂಧೆ ನಡೆಯುತ್ತಿತ್ತು.
ಹುಳ್ಳೇನಹಳ್ಳಿ ಗ್ರಾಮದ ನಯನ್ ಹಾಗೂ ಪಾಂಡವಪುರ ತಾಲೂಕಿನ ಸುಂಕಾತೊಣ್ಣೂರು ಗ್ರಾಮದ ನವೀನ್ ಎಂಬ ಇಬ್ಬರು ಭಾವ-ಬಾಮೈದುನರೂ ಆಲೆಮನೆಯನ್ನ ಬಾಡಿಗೆಗೆ ಪಡೆದು, ಪಕ್ಕದಲ್ಲಿಯೇ ಸಣ್ಣದಾದ ಶೆಡ್ ನಿರ್ಮಾಣ ಮಾಡಿ, ಅಲ್ಲಿಗೆ ಸ್ಕ್ಯಾನಿಂಗ್ ಮಷೀನ್ಗಳನ್ನು ಇಟ್ಟುಕೊಂಡಿದ್ದರು. ಮತ್ತೊಂದು ಗ್ಯಾಂಗ್ ಮಧ್ಯವರ್ತಿಗಳ ಸಹಾಯದಿಂದ ಗರ್ಭೀಣಿಯರನ್ನ ಸಂಪರ್ಕ ಮಾಡಿ ನಂತರ ಬೆಂಗಳೂರಿನಿಂದ ತಮ್ಮ ಖಾಸಗಿ ವಾಹನಗಳಲ್ಲೇ ಕರೆದುಕೊಂಡು ಬಂದು ಭ್ರೂಣ ಲಿಂಗ ಪತ್ತೆ ಮಾಡುತ್ತಿದ್ದರು. ಅಲ್ಲಿ ಭ್ರೂಣ ಹೆಣ್ಣು ಎಂದು ತಿಳಿದರೆ ಮೈಸೂರಿಗೆ ಕರೆದುಕೊಂಡು ಹೋಗಿ ಗರ್ಭಪಾತ ಮಾಡಿಸುತ್ತಿದ್ದರು. ಬಂಧಿತರಿಂದ 900 ಭ್ರೂಣ ಹತ್ಯೆ ನಡೆದಿರುವ ಅಂಶ ಬೆಳಕಿಗೆ ಬಂದಿದೆ.
ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಮಾತನಾಡಿ, "ನಮ್ಮ ಸರ್ಕಾರದಲ್ಲಿ ಈ ರೀತಿಯ ಅಕ್ರಮ ಚಟುವಟಿಕೆಗಳಿಗೆ ಯಾವುದೇ ಅವಕಾಶ ಇಲ್ಲ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಯಾವುದೇ ಭಾಗದಲ್ಲಿ ಅಕ್ರಮ ಚಟುವಟಿಕೆಗಳು ನಡೆಯದಂತೆ ತಡೆಯಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಆದೇಶ ಕೊಟ್ಟಿದ್ದಾರೆ. ಇನ್ನು ಕೆಲವು ದಿನಗಳಲ್ಲಿ ಈ ರೀತಿಯ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಬೀಳುತ್ತೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಸರ್ಕಾರ ಜನರ ಪರವಾಗಿ ಕೆಲಸ ಮಾಡುತ್ತಿದೆ" ಎಂದರು.
"ಭ್ರೂಣ ಹತ್ಯೆಯು ಸಮಾಜ ಘಾತುಕ ಕೆಲಸವಾಗಿದೆ, ಇದನ್ನು ನಾನು ಖಂಡಿಸುತ್ತೇನೆ. ಈ ರೀತಿಯ ಕೃತ್ಯಗಳಿಗೆ ಜನರು ಪ್ರೋತ್ಸಾಹ ಕೊಡುವುದು ತಪ್ಪು, ಇದನ್ನು ಮಾಡಬಾರದು. ಕಾನೂನಿನ ಮೂಲಕ ಅಗತ್ಯ ಕ್ರಮ ತೆಗೆದುಕೊಂಡು ಈ ರೀತಿಯ ಕೃತ್ಯಗಳನ್ನು ತಡೆಯುತ್ತೇವೆ" ಎಂದು ಹೇಳಿದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, "ಇದೊಂದು ದೊಡ್ಡ ಅಪರಾಧ. ಈ ಕೃತ್ಯದಲ್ಲಿ ಯಾರ‍್ಯಾರು ಭಾಗಿಯಾಗಿದ್ದಾರೆ ಅವರಿಗೆ ತಕ್ಕ ಶಿಕ್ಷೆಯಾಗಬೇಕು. ಈ ಕಾಲದಲ್ಲೂ ಈ ತರಹದ ಕೆಲಸ ನಡೆಯುತ್ತಿವೆ ಎಂದರೆ ನನಗೆ ನಂಬಲು ಆಗುತ್ತಿಲ್ಲ. ಈ ಕಾಲದಲ್ಲೂ ಈ ರೀತಿ ನಡೆದಿರುವುದು ದೊಡ್ಡ ಅಪರಾಧ. ಎಲ್ಲಾ ಅಧಿಕಾರಿಗಳ ಜೊತೆ ಮಾತನಾಡಿ ಸೂಕ್ತ ಕ್ರಮ ತೆಗೆದುಕೊಳ್ಳುಬೇಕು ಎಂದು ತಿಳಿಸುತ್ತೇನೆ. ಈ ಪ್ರಕರಣದಲ್ಲಿ ಯಾರನ್ನು ಬಿಡಬಾರದು, ಯಾರ ಒತ್ತಡಕ್ಕೂ ಮಣಿಯಬಾರದು. ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಬಂಧಿಸಿಬೇಕು ಮತ್ತು ಅವರಿಗೆ ತಕ್ಕ ಶಿಕ್ಷೆಯಾಬೇಕು" ಎಂದರು.
ಇದನ್ನೂ ಓದಿ: ತಿಂಗಳಿಗೆ 20 ರಿಂದ 25 ಹೆಣ್ಣು ಭ್ರೂಣ ಹತ್ಯೆ: ವೈದ್ಯ ಸೇರಿ ಮತ್ತೆ ಐವರ ಬಂಧನ