ಮಂಡ್ಯ: ಪಾಂಡವಪುರ ತಾಲೂಕಿನ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಮೇಲುಕೋಟೆಯ ಯೋಗಾನರಸಿಂಹ ಸ್ವಾಮಿ ಗೋಪುರ ಕಳಶ ಬಾಗಿದೆ. ಇದು ಕೆಡಕಿನ ಮುನ್ಸೂಚನೆಯೇ ಎಂದು ಭಕ್ತರು ಆತಂಕದಲ್ಲಿದ್ದಾರೆ.
ನೂರಾರು ವರ್ಷಗಳ ಪುರಾತನ ಗೋಪುರ ಕಳಶ ವಾಲಿದೆ. ಪುರಾತನ ದೇವಾಲಯದ ರಾಜಗೋಪುರದಲ್ಲಿ ಭಿನ್ನವಾಗಿದೆ. ಇದನ್ನ ಕಂಡ ಭಕ್ತರು ಬೇಸರದೊಂದಿಗೆ ಆತಂಕದಲ್ಲಿದ್ದಾರೆ.
ಗೋಪುರದ ಕಳಶದಲ್ಲಿ ದೇವಾನು ದೇವತೆಗಳು ವಾಸಿಸುತ್ತಾರೆಂಬ ನಂಬಿಕೆ ಇದ್ದು, ಗರ್ಭಗುಡಿಯ ದೇವರ ದರ್ಶನದಷ್ಟೇ ಕಳಸ ದರ್ಶನ ಮಹತ್ವ ಇದೆ. ಕಳಶ ಬಿದ್ದರೆ ಕೇಡು ನಿಶ್ಚಿತ ಎಂಬ ನಂಬಿಕೆ ಬಗ್ಗೆ ಜನರು ಚರ್ಚೆಯಲ್ಲಿ ಮುಳುಗಿದ್ದಾರೆ.
ಅಶುಭ ಸಂಕೇತದ ಕಳಶ ಹಿಂದಕ್ಕೆ ವಾಲಿ ತಿಂಗಳುಗಳೇ ಕಳೆದ್ರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ. ಹೀಗಾಗಿ, ಜನರು ಕೂಡ ಆಕ್ರೋಶ ಹೊರ ಹಾಕಿದ್ದಾರೆ. ಜನರ ನಂಬಿಕೆ ಜತೆ ಅಧಿಕಾರಿಗಳು ಚೆಲ್ಲಾಟ ಆಡುತ್ತಿದ್ದಾರೆಂಬ ಬೇಸರ ವ್ಯಕ್ತಪಡಿಸಿದ್ದಾರೆ.
ಶ್ರೀರಂಗನಾಥ ದೇವಾಲಯದ ಕಳಶ ಬಿದ್ದಾಗ ಮಹಾರಾಜರ ಸಾವು!?
ಶ್ರೀರಂಗಪಟ್ಟಣದ ಶ್ರೀರಂಗನಾಥ ದೇಗುಲದ ಗೋಪುರದ ಕಳಶ ಬಿದ್ದ ಕೆಲವೇ ತಿಂಗಳಲ್ಲಿ ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ಒಡೆಯರ್ ನಿಧನರಾಗಿದ್ದರು ಎನ್ನಲಾಗಿದೆ. ಶ್ರೀರಂಗನಾಥ ದೇಗುಲದ ಗೋಪುರದ ಕಳಶ ಬಿದ್ದಾಗಲೂ ನಿರ್ಲಕ್ಷ್ಯತೆ ಪ್ರದರ್ಶನವಾಗಿತ್ತು. ಈಗ ಯೋಗನರಸಿಂಹ ಸ್ವಾಮಿ ದೇವಾಲಯ ಕಳಶ ಬಾಗಿರುವುದರಿಂದ ಭಕ್ತರಲ್ಲಿ ಆತಂಕ ಹೆಚ್ಚಾಗಿದೆ. ಕಳಶ ಮರು ಪ್ರತಿಷ್ಠಾಪಿಸುವಂತೆ ಅಧಿಕಾರಿಗಳಿಗೆ ಜನರು ಮನವಿ ಮಾಡಿದ್ದಾರೆ.
ಮೇಲುಕೋಟೆಗೆ ಶಾಸಕ ಪುಟ್ಟರಾಜು ಭೇಟಿ ಪರಿಶೀಲನೆ : ಮೇಲುಕೋಟೆಯ ಯೋಗಾನರಸಿಂಹ ಸ್ವಾಮಿ ದೇಗುಲದ ಕಳಸ ಮುರಿದ ವಿಷಯ ತಿಳಿಯುತ್ತಿದ್ದಂತೆ ಕ್ಷೇತ್ರದ ಶಾಸಕ ಪುಟ್ಟರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೂಡಲೇ ಕಳಸ ದುರಸ್ಥಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಫೋನ್ ಮೂಲಕ ಸೂಚನೆ ನೀಡಿದ್ದಾರೆ.