ಮಂಡ್ಯ: ವಿಧಾನಸಭೆ ಚುನಾವಣೆ ಬೆನ್ನಲ್ಲೇ ಸಂಸದೆ ಸುಮಲತಾ ಅಂಬರೀಶ್ ರಾಜ್ಯ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರಾ? ಎಂಬ ಕುತೂಹಲ ಹೆಚ್ಚಾಗಿದೆ. ಈ ಬಗ್ಗೆ ಮಂಡ್ಯದ ಕರ್ನಾಟಕ ಸಂಘದಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಸುಮಲತಾ ಬೆಂಬಲಿಗರು ಹಾಗೂ ಕಾರ್ಯಕರ್ತರು ರಾಜ್ಯ ರಾಜಕೀಯಕ್ಕೆ ಬರುವಂತೆ ಅವರನ್ನು ಒತ್ತಾಯಿಸಿದ್ದಾರೆ.
ಅಲ್ಲದೇ ತಮ್ಮದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು, ಇಂತಿಷ್ಟು ಜನರು ಸುಮಲತಾ ಕಾಂಗ್ರೆಸ್ ಸೇರಬೇಕೆಂದು ಒತ್ತಾಯಿಸಿದ್ರೆ, ಇನ್ನುಳಿದವರು ಬಿಜೆಪಿ ಪರ ನಿಂತಿದ್ದಾರೆ. ಹೀಗಾಗಿಯೇ ಸುಮಲತಾ ಅಂಬರೀಶ್ ಅವರು ಒಂದು ವೇಳೆ ರಾಜ್ಯ ರಾಜಕಾರಣಕ್ಕೆ ಮರಳಿದರೆ ಯಾವ ಪಕ್ಷದಿಂದ ಕಣಕ್ಕಿಳಿಯುತ್ತಾರೆ? ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ. ಹಾಗೇನಾದರೂ ಆದರೆ ಸುಮಲತಾ ಅವರ ಆಯ್ಕೆ ಮಂಡ್ಯ ಕ್ಷೇತ್ರ ಆಗಲಿದೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿವೆ.
ಮಂಡ್ಯ ಜಿಲ್ಲೆಯು ಸುಮಲತಾ ಅವರ ಪತಿ ಅಂಬರೀಶ್ ಪ್ರತಿನಿಧಿಸುತ್ತಿದ್ದ ಕ್ಷೇತ್ರವಾಗಿದ್ದು, ಸುಮಾರು 25 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಛಾಪು ಮೂಡಿಸಿದ್ದರು. ಹಾಗಾಗಿ ಈ ಕ್ಷೇತ್ರದಿಂದಲೇ ಸುಮಲತಾ ಕಣಕ್ಕಿಳಿಯುತ್ತಾರೆ ಎನ್ನುವ ಲೆಕ್ಕಾಚಾರವಿದೆ. ಅಲ್ಲದೇ ಸುಮಲತಾ ಕಾಂಗ್ರೆಸ್ ಪಕ್ಷವನ್ನೇ ಆಯ್ದುಕೊಂಡಲ್ಲಿ ಸುಲಭವಾಗಿ ಗೆಲ್ಲಬಹುದು ಎಂಬ ವಿಶ್ವಾಸವಿದೆ. ಆದರೆ ಬೆಂಬಲಿಗರ ಸಭೆಯಲ್ಲಿ ಪಕ್ಷದ ನಿರ್ಣಯವನ್ನು ಅಂತಿಮವಾಗಿ ಸುಮಲತಾ ಅವರ ನಿರ್ಧಾರಕ್ಕೆ ಬಿಡಲಾಯಿತು. ಯಾವುದೇ ಪಕ್ಷ ಸೇರ್ಪಡೆಯಾದ್ರೂ ಬೆಂಬಲಿಸುತ್ತೇವೆ ಎಂದು ಎಲ್ಲರೂ ಕೈ ಚಾಚಿ ಪ್ರಮಾಣವಚನ ಸ್ವೀಕರಿಸಿದರು.
ಇದನ್ನೂ ಓದಿ: ನನ್ನ ಬಗ್ಗೆ ಮಾತನಾಡಿ ಸುಮಲತಾ ಮೈಲೇಜ್ ತೆಗೆದುಕೊಳ್ಳುತ್ತಿದ್ದಾರೆ.. ಸಂಸದೆಗೆ ಶಾಸಕ ಪುಟ್ಟರಾಜು ತಿರುಗೇಟು
ಈ ಬಗ್ಗೆ ಜಿಪಂ ಮಾಜಿ ಅಧ್ಯಕ್ಷ ಬಿ.ವಿವೇಕಾನಂದ ಮಾತನಾಡಿ, "ಅಂಬರೀಶ್ ಅವರ ಹುಟ್ಟೂರು ಮತ್ತು ಸುಮಲತಾ ಮತಕ್ಷೇತ್ರ ಮದ್ದೂರಿನಿಂದ ಸ್ಪರ್ಧೆಗೆ ನಿಲ್ಲುವಂತೆ ಒತ್ತಡ ಹೆಚ್ಚಿದೆ. ಹಾಗಂತ ಅವರು ಮೇಲುಕೋಟೆ ಕ್ಷೇತ್ರದಿಂದಲೂ ಸ್ಪರ್ಧಿಸಬಹುದು. ಪಾಂಡುಪುರದಿಂದ ನಿಂತರೂ ಅಚ್ಚರಿಯೇನಿಲ್ಲ. ಸಂಸದೆ ಸುಮಲತಾ ಯಾವುದೇ ಪಕ್ಷ ಸೇರ್ಪಡೆಗೊಂಡರು ಮತ್ತು ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಕೂಡ ನಮ್ಮ ಬೆಂಬಲ ಸಂಪೂರ್ಣವಿದೆ ಎಂದರು.
ಇದೇ ವೇಳೆ ಬೆಂಬಲಿಗ ಹನಕೆರೆ ಶಶಿ ಮಾತನಾಡಿ, ಸಂಸದೆ ಸುಮಲತಾ ರಾಜ್ಯ ರಾಜಕೀಯ ಪ್ರವೇಶ ಮಾಡಲೇಬೇಕು. ಯಾವುದೇ ಪಕ್ಷ ಸೇರಿದರೂ ಅವರ ಜೊತೆ ನಾವೆಲ್ಲರೂ ಇರುತ್ತೇವೆ. ಮಾಜಿ ಸಚಿವ ಸಿ.ಎಸ್ ಪುಟ್ಟರಾಜು ಹೇಳಿಕೆ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲು ನಿರ್ಧಾರವನ್ನು ಮಾಡಿದ್ದೇವೆ. ಸಂಸದರು ತೆಗೆದುಕೊಳ್ಳುವ ಯಾವುದೇ ನಿರ್ಣಯ, ನಿರ್ಧಾರಕ್ಕೆ ನಾವೆಲ್ಲರೂ ಬದ್ಧರು ಎಂದು ಸ್ಪಷ್ಟನೆ ನೀಡಿದರು.
ಇನ್ನು ರಾಜಕೀಯ ಎಂಟ್ರಿ ವಿಚಾರವಾಗಿ ಸಂಸದೆ ಸುಮಲತಾ ಈಗಾಗಲೇ ಪ್ರತಿಕ್ರಿಯೆ ನೀಡಿದ್ದಾರೆ. "ನನ್ನನ್ನು ಹಾಗೂ ಮಗ ಅಭಿಷೇಕ್ ಅನ್ನು ರಾಜ್ಯ ರಾಜಕೀಯಕ್ಕೆ ಬರುವಂತೆ ಬೆಂಬಲಿಗರು ಕರೆಯುತ್ತಿದ್ದಾರೆ. ಆದರೆ ಈ ವಿಚಾರವಾಗಿ ನಾನು ಏನನ್ನೂ ನಿರ್ಧರಿಸಿಲ್ಲ. ಯಾವುದೇ ಸಭೆಯನ್ನು ಕೂಡ ನಡೆಸಿಲ್ಲ. ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ. ಜಿಲ್ಲೆಯ ಅಭಿವೃದ್ಧಿ ನೋಡಿಕೊಂಡು ಪಕ್ಷ ಸೇರ್ಪಡೆ ವಿಚಾರದ ಬಗ್ಗೆ ಯೋಚನೆ ಮಾಡುತ್ತೇನೆ. ಎಲ್ಲಾ ಸರಿಯಾಗಿ ತೀರ್ಮಾನವಾದ ಮೇಲೆ ನಾನೇ ಘೋಷಿಸುತ್ತೇನೆ" ಎಂದು ಹೇಳಿದ್ದರು.
ಇದನ್ನೂ ಓದಿ: ಮಂಡ್ಯದಲ್ಲಿ ಆಪರೇಷನ್ ಕಮಲ: ಸುಮಲತಾ ಆಪ್ತ ಸಚ್ಚಿದಾನಂದ ಸೇರಿ ಹಲವರು ಬಿಜೆಪಿಗೆ ಸೇರ್ಪಡೆ