ಮಂಡ್ಯ: ಚುನಾವಣೆಗೂ ಮುನ್ನವೆ ಸಕ್ಕರೆನಾಡು ಮಂಡ್ಯದಲ್ಲಿ ರಾಜಕೀಯ ಅಖಾಡ ರಂಗೇರಿದೆ ಜಿಲ್ಲೆಯಲ್ಲಿ ಮಹಿಳಾ ಮತದಾರರ ಗಮನ ಸೆಳೆಯಲು ಕಾಂಗ್ರೆಸ್ ಪಕ್ಷ ಸಜ್ಜಾಗಿದ್ದು, ಬೃಹತ್ ಮಹಿಳಾ ಸಮಾವೇಶದ ಆಯೋಜನೆ ಮೂಲಕ ಕೈ ನಾಯಕರು ಮತ ಬೇಟೆಗೆ ಮುಂದಾಗಿದ್ದಾರೆ.
ಕಾಂಗ್ರೆಸ್ ಪಕ್ಷದ ವತಿಯಿಂದ ಸೋಮವಾರ ನಾಗಮಂಗಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೊಪ್ಪದಲ್ಲಿ ಬೃಹತ್ ಮಹಿಳಾ ಸಮಾವೇಶ ಏರ್ಪಡಿಸಲಾಗಿತ್ತು. ಈ ಮಹಿಳಾ ಸಮಾವೇಶಕ್ಕೆ ಮುಖ್ಯ ಅತಿಥಿಯಾಗಿ ಕೈ ನಾಯಕಿ, ಮಾಜಿ ಸಚಿವೆ ಉಮಾಶ್ರೀ ಆಗಮಿಸಿದ್ದರು. ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಇರುವವರೆಗೆ ಜನರು ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ಮುಂದಿನ ತಿಂಗಳಲ್ಲಿ ಚುನಾವಣೆ ಕಾವು ಹೆಚ್ಚಾಗುತ್ತಾ ಹೋಗುತ್ತದೆ. ಈ ಸಂದರ್ಭದಲ್ಲಿ ಮಹಿಳೆಯರು ಜಾಗೃತರಾಗಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ಪಕ್ಷ ಮಹಿಳೆಯರ ಪರ ಇರುವ ಪಕ್ಷ: ದೇಶದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಎಲ್ಲರಿಗೂ ಗೊತ್ತಿದೆ. ಈ ದೇಶದ ಮಹಾನ್ ಶಕ್ತಿ ಇಂದಿರಾಗಾಂಧಿ. ಅವರ ಆಡಳಿತದಲ್ಲಿ ಜನ ಪರ ಕೆಲಸಗಳನ್ನು ಮಾಡಿದ್ದರು. ಅವರ ಕೆಲಸವನ್ನು ಇವತ್ತು ಮರೆಯಲು ಸಾಧ್ಯವಾಗುವುದಿಲ್ಲ, ಬಡವರಿಗಾಗಿ ರೆಷನ್ ಕಾರ್ಡ್ ಪದ್ಧತಿಯನ್ನು ತಂದಿದ್ದು ಇಂದಿರಾ ಗಾಂಧಿಯವರು ಮತ್ತು ಉಳುವವನೇ ಭೂಮಿ ಒಡೆಯ ಕಾರ್ಯಕ್ರಮ ಕೊಟ್ಟಿದ್ದು ಕಾಂಗ್ರೆಸ್ ಪಕ್ಷದ ದೇವರಾಜ್ ಅರಸು ಅವರು, ಇಂದಿರಾಗಾಂಧಿ ಇದ್ದಿದ್ದರೇ ಬಡವರನ್ನು ಎದ್ದೇಳಿಸುತ್ತಿದ್ದರು. ಮಹಿಳೆಯರ ರಕ್ಷಣೆ ಮಾಡುವ ಕಾಂಗ್ರೆಸ್ಗೆ ಆಶೀರ್ವಾದ ಮಾಡಿ ಎಂದು ಉಮಾಶ್ರೀ ಅವರು ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಜಾತಿ ಧರ್ಮ ಇಲ್ಲ. ಕೋಮುವಾದ ಸೃಷ್ಟಿ ಮಾಡುವ ಬಿಜೆಪಿಯವರು ದೇಶವನ್ನು ಛಿದ್ರ ಮಾಡಿದ್ದಾರೆ. ಬಿಜೆಪಿ ಇರುವವರೆಗೆ ಜನರು ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ ಎಂದು ಬಿಜೆಪಿ ವಿರುದ್ದ ಮಾಜಿ ಸಚಿವೆ ಉಮಾಶ್ರೀ ವಾಗ್ದಾಳಿ ನಡೆಸಿದರು.
ಮಹಿಳಾ ಸಮಾವೇಶದಲ್ಲಿ ಮಾಜಿ ಸಚಿವ ಚೆಲುವನಾರಾಯಣ ಸ್ವಾಮಿ ಮಾತನಾಡಿ, ಜೆಡಿಎಸ್-ಬಿಜೆಪಿ ದೂರ ಇಟ್ಟು ಕಾಂಗ್ರೆಸ್ಗೆ ಅಧಿಕಾರ ಕೊಡಿ. ಚುನಾವಣೆ ರಾಜ್ಯದ ದೃಷ್ಠಿಯಿಂದ ಮತ್ತು ರಾಷ್ಟ್ರದ ದೃಷ್ಠಿಯಿಂದ ಬಹಳ ಮುಖ್ಯ. ಬಿಜೆಪಿಯವರು ಇಂದಿರಾ ಕ್ಯಾಂಟೀನ್ ಅನ್ನು ನಿಲ್ಲಿಸಿದರು, 7 ಕೆಜಿ ಇದ್ದ ಅಕ್ಕಿಯನ್ನು 5 ಕೆಜಿಗೆ ತಂದರು. ಯಾವುದೇ ಆಶ್ರಯ ಮನೆ ಕೊಡಲಿಲ್ಲ. ದಲಿತ ಮಕ್ಕಳಿಗೆ ಸ್ಕಾಲರ್ಶಿಪ್ ಕೊಡುವುದನ್ನು ನಿಲ್ಲಿಸಿದರು ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಸ್ವ-ಸಹಾಯ ಮತ್ತು ಸ್ತ್ರೀಶಕ್ತಿ ಸಂಘ ತಂದಿದ್ದು ಕಾಂಗ್ರೆಸ್ ಪಕ್ಷ. ಮಹಿಳೆಯರನ್ನು ಪ್ರತಿ ಹಂತದಲ್ಲಿ ಗುರುತಿಸುವಂತಹ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 5 ಲಕ್ಷ ಬಡ್ಡಿ ಇಲ್ಲದೆ ಸಾಲ ಕೊಡುತ್ತೀವಿ. ಬಿಜೆಪಿ ಮತ್ತು ಜೆಡಿಎಸ್ ಈ ಎರಡೂ ಪಕ್ಷಗಳನ್ನು ಹೊರಗಿಟ್ಟು ಕಾಂಗ್ರೆಸ್ ಗೆ ಆಶೀರ್ವದಿಸಿ ಎಂದು ಮಾಜಿ ಸಚಿವ ಚೆಲುವನಾರಾಯಣ ಸ್ವಾಮಿ ಮನವಿ ಮಾಡಿಕೊಂಡರು.
ಇದನ್ನೂ ಓದಿ: ಚುನಾವಣೆ ಬಂದಾಗ ಬೋಗಸ್ ಕಾರ್ಡ್ ಸರಣಿ ಆರಂಭ: ಕಾಂಗ್ರೆಸ್ ವಿರುದ್ಧ ಸಿಎಂ ಗರಂ