ಮಂಡ್ಯ: ಅಕ್ರಮವಾಗಿ ಚನ್ನಪಟ್ಟಣದ ಕಡೆಯಿಂದ ಮದ್ದೂರಿಗೆ ಗೂಡ್ಸ್ ಟೆಂಪೊವೊಂದರಲ್ಲಿ ಸಾಗಿಸುತ್ತಿದ್ದ ಸುಮಾರು 65 ಕ್ವಿಂಟಾಲ್ ಅನ್ನಭಾಗ್ಯ ಪಡಿತರ ಅಕ್ಕಿಯನ್ನು ಮದ್ದೂರು ಸಮೀಪದ ಸೋಮನಹಳ್ಳಿಯ ಬಳಿ ಗ್ರಾಮಸ್ಥರು ಹಿಡಿದು ತಹಶೀಲ್ದಾರ್ ವಶಕ್ಕೆ ಒಪ್ಪಿಸಿರುವ ಘಟನೆ ನಡೆದಿದೆ.
ಚನ್ನಪಟ್ಟಣದ ದೇವರಾಜು ಎಂಬುವವರು ನ್ಯಾಯಬೆಲೆ ಅಂಗಡಿಗಳಿಂದ ಅನ್ನಭಾಗ್ಯ ಅಕ್ಕಿ ಖರೀದಿಸಿ ದಾಸ್ತಾನು ಮಾಡಿ ನಂತರ ಮದ್ದೂರಿನ ಹೋಟೆಲ್ ಮತ್ತು ಅಂಗಡಿಗಳಿಗೆ ಕಾಳ ಸಂತೆಯಲ್ಲಿ ಮಾರಾಟ ಮಾಡುವುದಕ್ಕಾಗಿ ಟೆಂಪೊವೊಂದರಲ್ಲಿ ಬರುತ್ತಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ನಂತರ ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಹೆಚ್. ಬಿ.ವಿಜಯ್ ಕುಮಾರ್, ಆಹಾರ ಇಲಾಖೆ ನಿರೀಕ್ಷಕ ರಾಜು, ಸಿ.ಪಿ. ಐ.ಭರತ್ ಗೌಡ, ವಿನಯ್ ಬೇಟಿ ನೀಡಿ ಅಕ್ಕಿ ಸಮೇತ ಟೆಂಪೋವನ್ನು ವಶಕ್ಕೆ ತೆಗೆದುಕೊಂಡು ಟೆಂಪೋ ಚಾಲಕ ಹರೀಶ್ ನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಈ ವೇಳೆ ಪ್ರಮುಖ ಆರೋಪಿ ದೇವರಾಜ್ ಪರಾರಿಯಾಗಿದ್ದಾನೆ.
ಈ ಸಂಬಂಧ ಟೆಂಪೋ ಚಾಲಕ ಹರೀಶ್ ಹಾಗೂ ಮಾಲೀಕ ದೇವರಾಜ್ ವಿರುದ್ದ ಅಗತ್ಯ ವಸ್ತುಗಳ ಕಾಯ್ದೆ ಅನ್ವಯ ಮದ್ದೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.