ಮಂಡ್ಯ : ರಾಜ್ಯದಲ್ಲಿ ಸಕ್ಕರೆನಾಡು ಎಂದರೆ ಮೊದಲು ನೆನಪಾಗುವುದೇ ಮಂಡ್ಯ ಜಿಲ್ಲೆ. ಈ ಭಾಗದ ಜನರು ಉತ್ತಮ ನೀರಾವರಿ ವ್ಯವಸ್ಥೆ ಇರುವುದರಿಂದ ಅತಿ ಹೆಚ್ಚು ಕಬ್ಬು ಬೆಳೆಯುತ್ತಾರೆ. ಹೀಗಾಗಿ ಜಿಲ್ಲೆಯಲ್ಲಿ ಮೈಶುಗರ್ ಕಾರ್ಖಾನೆ ದೊಡ್ಡ ಮಟ್ಟದಲ್ಲಿ ರೈತರಿಗೆ ಅನುಕೂಲವಾಗುವಂತೆ ಕಾರ್ಯ ನಿರ್ವಹಿಸುತ್ತಿತ್ತು. ಕಾರಣಾಂತರಗಳಿಂದ ರಾಜ್ಯ ಸರ್ಕಾರದ ಏಕೈಕ ಸಕ್ಕರೆ ಕಾರ್ಖಾನೆ ಮುಚ್ಚಬೇಕಾದ ಪರಿಸ್ಥಿತಿ ಎದುರಾಗಿತ್ತು.
ಇದೀಗ ಮುಚ್ಚಿದ ಮೈಶುಗರ್ ಕಾರ್ಖಾನೆ ಬಾಯ್ಲರ್‌ಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಸಾಂಕೇತಿಕವಾಗಿ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಚಾಲನೆ ನೀಡಿದ್ದಾರೆ. ಇದರಿಂದ ಮಂಡ್ಯ ಜಿಲ್ಲೆಯ ರೈತರಿಗೆ ಸಿಹಿ ಸುದ್ದಿಕೊಡುವುದರ ಜೊತೆಗೆ ಐತಿಹಾಸಿಕ ಘಟನೆಗೆ ಮೈಶುಗರ್ ಸಾಕ್ಷಿಯಾಗಿದೆ.
ಚಾಲನೆ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಸಚಿವ ಶಿವಾನಂದ ಪಾಟೀಲ್, ಕಾರ್ಖಾನೆ ಪ್ರತಿನಿತ್ಯ 3 ಸಾವಿರದಿಂದ 4 ಸಾವಿರ ಟನ್ ಕಬ್ಬು ಅರೆಯದಿದ್ದರೆ ಪುನಶ್ಚೇತನ ಮಾಡಲು ಸಾಧ್ಯವಿಲ್ಲ. ಕಾರ್ಖಾನೆಯನ್ನು ಹೆಚ್ಚು ಕಬ್ಬು ಅರೆಯುವುದಕ್ಕೆ ಅನುಗುಣವಾಗಿ ಸಜ್ಜುಗೊಳಿಸಲಾಗಿದೆ. ಈಗಾಗಲೇ ಅಂದಾಜು 5.03 ಲಕ್ಷ ಟನ್ ಕಬ್ಬು ಸರಬರಾಜಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಮುಂದಿನ ಒಂದು ವಾರದೊಳಗೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಆರಂಭಗೊಳ್ಳಲಿದೆ ಎಂದರು.
ಮೈಶುಗರ್ ವ್ಯಾಪ್ತಿಯ ಕಬ್ಬು ಬೆಳೆಗಾರರು ಕಾರ್ಖಾನೆಗೆ ಕಬ್ಬು ಸಾಗಿಸುವ ಮೂಲಕ ಕಬ್ಬು ಅರೆಯುವಿಕೆ ಕಾರ್ಯ ಸುಗಮವಾಗಿ ನಡೆಯಲು ಸಹಕರಿಸಬೇಕು. ಕಬ್ಬನ್ನು ಖಾಸಗಿ ಕಾರ್ಖಾನೆಗಳಿಗೆ ಸಾಗಿಸುವ ಬದಲು ಮೈಶುಗರ್ ಕಾರ್ಖಾನೆಗೆ ತನ್ನಿ. ಖಾಸಗಿ ಕಾರ್ಖಾನೆಯವರು ನೀಡುವ ಬೆಲೆಯಷ್ಟೇ ನಾವು ನೀಡುವ ಪ್ರಯತ್ನ ಮಾಡುತ್ತೇವೆ. ರೈತರು ಕಬ್ಬನ್ನು ಅವರಿಗೆ ಇಷ್ಟ ಇರುವ ಕಡೆ ಮತ್ತು ಹೆಚ್ಚು ಬೆಲೆ ನೀಡುವ ಕಡೆ ಮಾರಾಟ ಮಾಡುವ ಹಕ್ಕಿದೆ. ಅತಿ ಹೆಚ್ಚು ಕಬ್ಬನ್ನು ಮೈಶುಗರ್ ಕಾರ್ಖಾನೆಗೆ ತೆಗೆದುಕೊಂಡು ಬನ್ನಿ ಎಂದು ಸಚಿವ ಪಾಟೀಲ್ ಮನವಿ ಮಾಡಿದರು.
ಪ್ರತಿ ವರ್ಷ ಆಗಸ್ಟ್-ಸೆಪ್ಟಂಬರ್ ತಿಂಗಳಲ್ಲಿ ಕಾರ್ಖಾನೆಗೆ ಚಾಲನೆ ನೀಡಲಾಗುತ್ತಿತ್ತು. ಈ ಬಾರಿ ರೈತರಿಗೆ ಅನುಕೂಲವಾಗುವಂತೆ ಜೂನ್ ತಿಂಗಳಲ್ಲೇ ಕಬ್ಬು ಅರೆಯುವಿಕೆಗೆ ಚಾಲನೆ ನೀಡಲಾಗಿದೆ. ಸರ್ಕಾರ ಕೂಡ 50 ಕೋಟಿ ರೂ. ಹಣವನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡುವ ಮೂಲಕ ಕಾರ್ಖಾನೆ ಕಾರ್ಯಾಚರಣೆಗೆ ನೆರವಾಗಿದೆ. ಕಾರ್ಖಾನೆಯಲ್ಲಿ ವಿದ್ಯುತ್ ಘಟಕ, ಡಿಸ್ಟಿಲರಿ ಘಟಕ ಸಮರ್ಪಕವಾಗಿ ನಡೆಯಲು ಹಾಗೂ ಮಲಾಸಸ್ ಉತ್ಪದನೆ ಹೆಚ್ಚಾಗಬೇಕಾದರೆ ನಿರೀಕ್ಷಿತ ಪ್ರಮಾಣದಲ್ಲಿ ಕಬ್ಬು ಅರೆಯುವಿಕೆ ನಡೆಯಬೇಕು. ಸಕ್ಕರೆ ಉತ್ಪಾದನೆಗಷ್ಟೇ ಸೀಮಿತಗೊಳಿಸಿದರೆ ಕಾರ್ಖಾನೆಯನ್ನು ಸುಧಾರಣೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಶಿವಾನಂದ ಪಾಟೀಲ್ ಹೇಳಿದರು.
ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ಮಾತನಾಡಿ, ಕಾರ್ಖಾನೆ ಇದುವರೆಗೆ ಹಲವು ರಾಜಕೀಯ ಕಾರಣಗಳಿಂದಾಗಿ ಸಮರ್ಪಕವಾಗಿ ಮುನ್ನಡೆಯಲು ಸಾಧ್ಯವಾಗಿರಲ್ಲ. ಇದೀಗ ಸರ್ಕಾರ ರಚನೆಯಾದ 15 ದಿನದಲ್ಲೇ ಪ್ರತಿ ಸಲ 15 ಕೋಟಿ ಬಿಡುಗಡೆ ಮಾಡುವುದು ತಡವಾಗಬಹುದು ಎಂದು ಒಟ್ಟಿಗೆ 50 ಕೋಟಿ ಹಣ ಬಿಡುಗಡೆ ಮಾಡಿದೆ. ಕಾರ್ಖಾನೆ ಸುಗಮನವಾಗಿ ನಡೆಯಲು ಸರ್ಕಾರ ನೆರವಾಗಿದೆ. ಮುಂದಿನ ದಿನಗಳಲ್ಲಿ ಸಹ ವಿದ್ಯುತ್ ಘಟಕ, ಡಿಸ್ಟಿಲರಿ ಘಟಕ ಆರಂಭಿಸಲು ಹೆಚ್ಚಿನ ಒತ್ತು ನೀಡಲಾಗುವುದು. ಹೀಗೆ ಹಂತ ಹಂತವಾಗಿ ನಾವು ನೀಡಿರುವ ಭರವಸೆಗಳನ್ನು ಈಡೇರಿಸುತ್ತೇವೆ ಎಂದರು.
ಇದನ್ನೂ ಓದಿ : Mysugar factory : ರಾಜ್ಯ ಸರ್ಕಾರದಿಂದ ಮೈಶುಗರ್ ಕಾರ್ಖಾನೆಗೆ 50ಕೋಟಿ ಬಿಡುಗಡೆ ; ಸಚಿವ ಚೆಲುವರಾಯಸ್ವಾಮಿ