ಮಂಡ್ಯ: ಲೋಕಸಭಾ ಚುನಾವಣೆ ಗೆದ್ದ ಖುಷಿಯಲ್ಲಿರುವ ಸುಮಲತಾ ಅಂಬರೀಶ್ ಕಚೇರಿಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ. ಚಾಮುಂಡೇಶ್ವರಿ ನಗರದಲ್ಲಿ ಮನೆ ಕಮ್ ಆಫೀಸ್ ಮಾಡಿದ್ದರೂ ಸರ್ಕಾರಿ ಕಚೇರಿಗಾಗಿ ಸರ್ಕಾರಿ ಕಟ್ಟಡಗಳ ತಲಾಶ್ ಆರಂಭ ಮಾಡಿದ್ದಾರೆ.
ಇಂದು ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆಯೂ ಎರಡು ಸರ್ಕಾರಿ ಕಟ್ಟಡಗಳಿಗೆ ತೆರಳಿ ವಾಸ್ತು ಇರುವ ಕಚೇರಿಗಾಗಿ ಹುಡುಕಾಟ ಆರಂಭ ಮಾಡಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಹಳೇಯ ಕಚೇರಿಯ ಜೊತೆಗೆ ಕಾವೇರಿ ನೀರಾವರಿ ನಿಗಮ, ಲೋಕೋಪಯೋಗಿ ಕಟ್ಟಡಗಳಲ್ಲಿನ ಮಾಹಿತಿ ಸಂಗ್ರಹ ಮಾಡಿ, ಸೂಕ್ತ ಜಾಗಕ್ಕೆ ಹುಡುಕಾಟ ಮಾಡಿದರು.
ತಮ್ಮ ಬೆಂಬಲಿಗರ ಜೊತೆ ಮೊದಲು ಜಿಲ್ಲಾಧಿಕಾರಿ ಕಚೇರಿಯ ಕಟ್ಟಡಕ್ಕೆ ಭೇಟಿ ನೀಡಿ, ಹಿಂದಿನ ಸಂಸದರ ಸರ್ಕಾರಿ ಕಚೇರಿ ಪರಿಶೀಲನೆ ನಡೆಸಿದರು. ನಂತರ ಕಾವೇರಿ ನೀರಾವರಿ ನಿಗಮ ಮತ್ತು ಲೋಕೋಪಯೋಗಿ ಇಲಾಖೆಯ ಕಟ್ಟಡಗಳಿಗೂ ತೆರಳಿ ಪರಿಶೀಲನೆ ನಡೆಸಿದರು. ಸದ್ಯಕ್ಕೆ ಚಾಮುಂಡೇಶ್ವರಿ ನಗರದ ಮನೆಯನ್ನು ಕಚೇರಿ ಮಾಡಿಕೊಂಡು, ವಾರಕ್ಕೆ ಮೂರು ದಿನ ಅಲ್ಲಿ ಸಾರ್ವಜನಿಕರ ಕುಂದು-ಕೊರತೆಗಳನ್ನು ಆಲಿಸಲಿದ್ದಾರೆ. ಮಿಕ್ಕ ದಿನಗಳ ಕೆಲಸಕ್ಕಾಗಿ ಸರ್ಕಾರಿ ಕಟ್ಟಡದ ಹುಡುಕಾಟ ನಡೆಸುತ್ತಿದ್ದಾರೆ.