ಮಂಡ್ಯ : ಜಿಲ್ಲೆಯಲ್ಲಿ ಒಂದು ಕಡೆ ಅಕ್ರಮ ಗಣಿಗಾರಿಕೆ ವಿರುದ್ಧ ಸಂಸದೆ ಸುಮಲತಾ ಸಮರ ಸಾರಿದ್ದಾರೆ. ಇತ್ತ ಜಿಲ್ಲೆಯ ಜೆಡಿಎಸ್ ಶಾಸಕರು ಸ್ಥಗಿತಗೊಂಡಿರುವ ಸಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಸದನದಲ್ಲಿ ಗಂಭೀರವಾಗಿ ಚರ್ಚಿಸಿ ಸರ್ಕಾರದ ಗಮನ ಸೆಳೆಯಲು ಸಜ್ಜಾಗಿದ್ದಾರೆ.
ಮಂಡ್ಯದ ಜಿದ್ದಾಜಿದ್ದಿನ ರಾಜಕಾರಣದಲ್ಲಿ ಸದಾ ಒಂದಲ್ಲೊಂದು ವಿಚಾರಗಳು ಅಲ್ಲೋಲ ಕಲ್ಲೋಲ ಸೃಷ್ಟಿಸಿ, ಚರ್ಚೆಗೆ ಒಳಗಾಗುತ್ತಲೇ ಇರುತ್ತವೆ. ಕೆಲ ತಿಂಗಳ ಹಿಂದೆಯಷ್ಟೆ ಕೆಆರ್ಎಸ್ ಸುತ್ತಮುತ್ತ ನಡೆಯುತ್ತಿರುವ ಗಣಿಗಾರಿಕೆಯ ಸ್ಫೋಟದ ತೀವ್ರತೆಯಿಂದ ಡ್ಯಾಂ ಬಿರುಕು ಬಿಟ್ಟಿದೆ ಎಂಬ ಸಂಸದೆ ಸುಮಲತಾ ಹೇಳಿಕೆ ದೊಡ್ಡಮಟ್ಟದ ವಾಕ್ಸಮರಕ್ಕೆ ಕಾರಣವಾಗಿತ್ತು.
ಆ ವಿವಾದದ ಜೊತೆ ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿಚಾರ ಸದ್ದು ಮಾಡಿದೆ. ಈ ಕುರಿತಂತೆ ಸುಮಲತಾ ಸಂಸತ್‌ನಲ್ಲಿ ಮಾತನಾಡಿ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದರು. ರಾಜ್ಯ ಸರ್ಕಾರಕ್ಕೆ ದೂರು ಕೊಟ್ಟು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.
ಸದನದಲ್ಲಿ ಚರ್ಚೆ ನಡೆಸಲು ಸಂಸದರು ಸಜ್ಜು : ಈ ಬಗ್ಗೆ ಸರಿಯಾಗಿ ಆಲೋಚನೆ ಮಾಡದ ಜಿಲ್ಲಾಡಳಿತ ಅಕ್ರಮದ ಜೊತೆ ಸಕ್ರಮ ಕಲ್ಲು ಗಣಿಗಾರಿಕೆಯನ್ನು ಏಕಾಏಕಿ ಸ್ಥಗಿತಗೊಳಿಸಿ ಬಿಟ್ಟಿತ್ತು. ಇದು ಜಿಲ್ಲೆಯ ಜೆಡಿಎಸ್ ಶಾಸಕರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ಜಿಲ್ಲೆಯ ಆರು ಮಂದಿ ಜೆಡಿಎಸ್ ಶಾಸಕರು ಅದೇ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿ ಚರ್ಚಿಸಲು ಮುಂದಾಗಿದ್ದಾರೆ.
ಚರ್ಚೆಗೆ ಶಾಸಕರು ತಯಾರಿ : ಸಂಸದರ ಮಾತು ಕೇಳಿ ಜಿಲ್ಲಾಡಳಿತ ಅಕ್ರಮ ಜೊತೆ ಸಕ್ರಮ ಗಣಿಗಾರಿಕೆಗಳನ್ನು 3 ತಿಂಗಳಿಂದ ಸ್ಥಗಿತಗೊಳಿಸಿದೆ. ಇದರಿಂದ ಜಿಲ್ಲೆಯ ಅಭಿವೃದ್ಧಿ ಕೆಲಸ ಕುಂಠಿತಗೊಂಡಿವೆ. ಜನಸಾಮಾನ್ಯರು ಮನೆ, ಶೌಚಾಲಯ ನಿರ್ಮಿಸಲು ಆಗದೆ ಹೊರ ಜಿಲ್ಲೆಗಳಿಂದ ದುಪ್ಪಟ್ಟು ಹಣ ನೀಡಿ ಕಟ್ಟಡ ಸಾಮಾಗ್ರಿ ತರಬೇಕಾದ ಅನಿವಾರ್ಯತೆ ಎದುರಾಗಿದೆ.
ಅತ್ತ ಗಣಿ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಮಧ್ಯೆ ಪ್ರವೇಶಿಸಿ ಜನರಿಗೆ ನ್ಯಾಯ ಒದಗಿಸಬೇಕಿತ್ತು. ಆದ್ರೆ, ಸರ್ಕಾರವಾಗಲಿ, ಗಣಿ ಸಚಿವರಾಗಲಿ ಇದರತ್ತ ಗಮನಿಸದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ. ಸೆ.13ರಿಂದ ಪ್ರಾರಂಭವಾಗಲಿರುವ ಸದನದಲ್ಲಿ ಈ ಕುರಿತು ಗಂಭೀರವಾಗಿ ಚರ್ಚೆ ಮಾಡುತ್ತೇನೆ ಎನ್ನುತ್ತಿದ್ದಾರೆ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ.
ಇನ್ನು, ಕೊರೊನಾ ಬಂದು ಜನ ಸಾಯೋದಲ್ಲ, ಇನ್ಮುಂದೆ ಗಣಿಗಾರಿಕೆ ನಂಬಿಕೊಂಡು ಜೀವನ ನಡೆಸುತ್ತಿದ್ದವರು ಸಾಯುತ್ತಾರೆ. ಹಿಂದೆ ಯಾವತ್ತೂ ಇಂತಹ ಕೆಟ್ಟ ಪರಿಸ್ಥಿತಿ ನಾವು ನೋಡಿರಲಿಲ್ಲ. ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮಕೈಗೊಳ್ಳಲಿ.
ಆದರೆ, ಅಕ್ರಮದ ಹೆಸರಲ್ಲೂ ಸಕ್ರಮ ಗಣಿಗಾರಿಕೆ ಮಾಡುವವರಿಗೆ ತುಂಬ ಹಿಂಸೆ ನೀಡಲಾಗುತ್ತಿದೆ. ಇದರ ಉದ್ದೇಶ ಏನು ಅಂತಾ ಅರ್ಥವಾಗುತ್ತಿಲ್ಲ. ಜನ ಮೆಟೀರಿಯಲ್ ಸಿಗದೆ ಕಂಗಾಲಾಗಿದ್ದಾರೆ. ದುಬಾರಿ ಬೆಲೆಗೆ ಎಂ ಸ್ಯಾಂಡ್ ಖರೀದಿ ಮಾಡುವ ಪರಿಸ್ಥಿತಿ ಎದುರಾಗಿದೆ ಅಂತಾರೆ ಗಣಿ ಮಾಲೀಕ ರವಿ ಭೋಜೇಗೌಡ.