ಮಂಡ್ಯ: ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ, ರಾಗಿ ಖರೀದಿ ಕೇಂದ್ರಗಳನ್ನು ಸಕಾಲದಲ್ಲಿ ಆರಂಭಿಸದಿರುವ ಬಗ್ಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಸೇರಿದಂತೆ ಇತರೆ ಶಾಸಕರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ಅವರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಷಯದ ಬಗ್ಗೆ ತೀವ್ರ ಚರ್ಚೆ ನಡೆಯಿತು.
ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ಖರೀದಿ ಕೇಂದ್ರಗಳನ್ನು ತೆರೆಯುವ ಸಂಬಂಧ ಸರ್ಕಾರ ನವೆಂಬರ್‌ನಲ್ಲಿ ಆದೇಶ ಹೊರಡಿಸಿದ್ದರೂ ಕೂಡ ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಪ್ರಸ್ತುತ ರೈತರ ಹೆಸರಿನಲ್ಲಿ ದಲ್ಲಾಳಿಗಳು ಭತ್ತ, ರಾಗಿ ಮಾರಾಟ ಮಾಡುತ್ತಿದ್ದು, ರೈತರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭತ್ತ ಕಟಾವಾಗಿ ಈಗಾಗಲೇ ತಿಂಗಳುಗಳೇ ಕಳೆದಿದೆ. ರೈತರು 1,200-1,300 ರೂ. ಗೆ ದಲ್ಲಾಳಿಗಳಿಗೆ ಮಾರಾಟ ಮಾಡಿದ್ದಾರೆ. ರೈತರಿಂದ ಖರೀದಿ ಮಾಡಿದ ದಲ್ಲಾಳಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಖರೀದಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದೆ. ತಡವಾಗಿ ಆರಂಭ ಆಗಿರುವ ಬಗ್ಗೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ ಎಂದು ಆರೋಪಿಸಿದರು. ಇದಕ್ಕೆ ದನಿಗೂಡಿಸಿದ ಶಾಸಕರಾದ ಕೆ. ಅನ್ನದಾನಿ, ಅಪ್ಪಾಜಿಗೌಡ, ಸಿ.ಎಸ್. ಪುಟ್ಟರಾಜು, ಕೆ.ಟಿ. ಶ್ರೀಕಂಠೇಗೌಡ, ಎಂ. ಶ್ರೀನಿವಾಸ್ ಅವರು ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ಸುದ್ದಿಯನ್ನೂ ಒದಿ: ಯಾವ ಮಾನದಂಡಗಳ ಮೇಲೆ ಸಚಿವರನ್ನ ಆಯ್ಕೆ ಮಾಡಿದ್ರಿ : ಸಿಎಂಗೆ ಶಾಸಕ ಸತೀಶ್ ರೆಡ್ಡಿ ಪ್ರಶ್ನೆ
ನವೆಂಬರ್‌ನಲ್ಲಿ ಆದೇಶ ಹೊರಡಿಸಿದರೂ ಈವರೆಗೆ ಏನು ಮಾಡುತ್ತಿದ್ದೀರಿ, ಸಾಮಾನ್ಯ ಜ್ಞಾನ ಇಲ್ಲವೇ? ಯಾವ ಯಾವ ತಾಲೂಕಿನಲ್ಲಿ ಎಷ್ಟು ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿದ್ದೀರಿ? ಇದು ರೈತರ ಜಿಲ್ಲೆಯಾಗಿದ್ದು ಮೊದಲು ಈ ವಿಷಯವನ್ನು ತಲೆಯಲ್ಲಿಟ್ಟುಕೊಂಡು ಕೆಲಸ ಮಾಡಿ ಎಂದು ಕೆಂಡಾಮಂಡಲರಾದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕಿ ಕುಮುದಾ ಮಾತನಾಡಿ, ಕಳೆದ ಬಾರಿ ಖರೀದಿ ಜವಾಬ್ದಾರಿಯನ್ನು ಉಗ್ರಾಣ ನಿಗಮ ವಹಿಸಿಕೊಂಡಿತ್ತು. ಈ ಬಾರಿ ಸಹಕಾರ ಮಾರಾಟ ಮಹಾಮಂಡಳಿಗೆ ಸರ್ಕಾರ ಬದಲಾವಣೆ ಮಾಡಿದೆ. ಇಲ್ಲಿಯವರೆಗೆ ಜಿಲ್ಲೆಯ ಎಪಿಎಂಸಿ, ರೈತ ಸಂಪರ್ಕ ಕೇಂದ್ರ ಸೇರಿದಂತೆ 30 ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆ ನಡೆದಿದ್ದು, 45ಸಾವಿರ ಕ್ವಿಂಟಾಲ್ ಬೆಳೆ ಖರೀದಿಸಲಾಗಿದೆ ಎಂದು ಹೇಳಿದರು.